ADVERTISEMENT

ದಲಿತ ವಚನಕಾರರಿಗೆ ಸಿಗದ ಆದ್ಯತೆ

ದಲಿತ ವಚನಕಾರರ ಜಯಂತಿ ಸಮಾರಂಭದಲ್ಲಿ ಸಾಹಿತಿ ಪರಮಶಿವ ನಡುಬೆಟ್ಟ ವಿಷಾದ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 8:23 IST
Last Updated 23 ಮಾರ್ಚ್ 2018, 8:23 IST

ಮೈಸೂರು: ಶೂನ್ಯ ಸಂಪಾದನೆಯಲ್ಲಿ ದಲಿತ ವಚನಕಾರರಿಗೆ ಒತ್ತು ಕೊಟ್ಟಿಲ್ಲ ಎಂದು ಸಾಹಿತಿ ಪರಮಶಿವ ನಡುಬೆಟ್ಟ ಇಲ್ಲಿ ಗುರುವಾರ ವಿಷಾದಿಸಿದರು.

ಜಿಲ್ಲಾಡಳಿತ, ಜಿಲ್ಲಾ ದಲಿತ ವಚನಕಾರರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವರ್ಣವ್ಯವಸ್ಥೆಯನ್ನು ಧಿಕ್ಕರಿಸಿದ ದಲಿತ ವಚನಕಾರರು ಕಾಯಕನಿಷ್ಠೆಗೆ ಒತ್ತುಕೊಟ್ಟರು. ಕಾಯಕದ ಮೂಲಕ ಗುರು, ಲಿಂಗ, ಜಂಗಮ ಕಂಡುಕೊಂಡರು ಎಂದು ತಿಳಿಸಿದರು.

ADVERTISEMENT

ದಲಿತ ವಚನಕಾರರಲ್ಲಿ ಮಾದಾರ ಚನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಪ್ರಮು ಖರು. ಇವರಲ್ಲದೆ ಕಂಬಳಿ ನಾಗಿದೇವ, ಸೂಳೆ ಸಂಕವ್ವೆ, ಸ್ವಪಚ, ಆಯ್ದಕ್ಕಿ ಮಾರಮ್ಮ ಮೊದಲಾದ 200ಕ್ಕೂ ಅಧಿಕ ದಲಿತ ವಚನಕಾರರು ಇದ್ದರು ಎಂದರು.

ಮೇಲ್ವರ್ಗದವರಿಗಿಂತ ಕಡಿಮೆ ಇಲ್ಲದಂತೆ ಶುದ್ಧ ಮನಸ್ಸಿನ ಭಕ್ತರಾಗಿ, ಕಾಯಕನಿಷ್ಠೆ ಮೂಲಕ ಗಮನ ಸೆಳೆದರು ಎಂದು ಶ್ಲಾಘಿಸಿದರು.

ಶರಣರ ಕಾಲದಲ್ಲಿದ್ದ ಸಮಾನತೆಯು ಈಗಿನ ಸಮಾಜದಲ್ಲಿ ಇಲ್ಲ ಎನ್ನುವುದು ಕಳವಳದ ಸಂಗತಿ. ಚಾಮರಾಜನಗರ ಜಿಲ್ಲೆಯ ಅಗರದಲ್ಲಿ ಪ್ರವಚನ ಕೇಳಿ ಪ್ರಭಾವಿತರಾದ ದಲಿತ ನಂಜಪ್ಪ ಅವರು ದೀಕ್ಷೆ ಪಡೆಯುವೆನೆಂದಾಗ, ಈ ಜನಗಳ ನಡುವೆ ದೀಕ್ಷೆ ಉಂಟೆ?, ದೀಕ್ಷೆ ನೀಡಿದರೆ ಬದುಕಲಾಗುವುದೆ ಎಂದು ಸವರ್ಣೀಯರು ಆತಂಕ ವ್ಯಕ್ತಪಡಿಸಿದರು.

ಆಮೇಲೆ ಗುರುಲಿಂಗಪ್ಪ ಅವರಿಂದ ನಂಜಪ್ಪ ದೀಕ್ಷೆ ಪಡೆಯುತ್ತಾರೆ. ನೀಲಗಿರಿ ಜಿಲ್ಲೆಯ ನಡುಬೆಟ್ಟದಲ್ಲಿ ದಲಿತ ಮಠದಲ್ಲಿದ್ದ ಗುರುಲಿಂಗಪ್ಪ ಅವರು 48 ದಿನಗಳವರೆಗೆ ತಪಸ್ಸು ಮಾಡಿದರು. ನಂತರ ಮುಚ್ಚಿದ ಬಾಗಿಲು ತೆಗೆದಾಗ ಅವರು ಆರೋಗ್ಯವಾಗಿಯೇ ಇದ್ದರು ಎಂದು ವಿವರಿಸಿದರು.

ಮೇಯರ್‌ ಬಿ.ಭಾಗ್ಯವತಿ ಉದ್ಘಾಟಿಸಿ ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪವಿಭಾಗಾಧಿಕಾರಿ ಶಿವೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸೋಮಯ್ಯ ಮಲೆಯೂರು, ರವಿಶಂಕರ್, ತಾಯೂರು ವಿಠಲ ಮೂರ್ತಿ, ವೇಣುಗೋಪಾಲ್, ಎಂ.ಬಿ.ವಿಶ್ವನಾಥ್, ಮೂಗೂರು ನಂಜುಂಡ ಸ್ವಾಮಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.