ಮೈಸೂರು: `ಜಾತಿ ವ್ಯವಸ್ಥೆ ಹೇರಿದ ಕಳಂಕ ಮತ್ತು ಪೂರ್ವಾಗ್ರಹಗಳಿಂದಾಗಿ ದಲಿತ ಸಾಹಿತ್ಯ ವಿಮರ್ಶೆಯ ಕೊರತೆ ಎದುರಿಸುತ್ತಿದೆ' ಎಂದು ಸಾಹಿತಿ ಡಾ.ಮುಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಕಲಾಮಂದಿರದ ಮನೆಯಂಗಳದಲ್ಲಿ ಚಾಮರಾಜನಗರ ಜಿಲ್ಲೆಯ ರಂಗವಾಹಿನಿ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಕವಿ ಪ್ರೊ.ಟಿ. ಯಲ್ಲಪ್ಪ ಅವರಿಗೆ `ಮುಳ್ಳೂರು ನಾಗರಾಜ' ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
`ಸಾಹಿತ್ಯದ ಅತ್ಯುತ್ತಮ ಮಾಧ್ಯಮ ಕಾವ್ಯ. ಅದು ಜನಸಾಮಾನ್ಯರನ್ನು ತಲುಪದೇ ಇದ್ದಾಗ ವಿಮರ್ಶಕರು ಆ ಕೆಲಸ ಮಾಡುತ್ತಾರೆ. ಆದರೆ, ದಲಿತ ಸಾಹಿತ್ಯವನ್ನು ಓದುಗರಿಗೆ ತಲುಪಿಸುವ ವಿಮರ್ಶಕರು ಇಲ್ಲ. ಸ್ವತಃ ದಲಿತ ಸಮುದಾಯ ದಲ್ಲೂ ಅಂತಹ ವಿಮರ್ಶಕರಿಲ್ಲದಿರುವುದು ವಿಪರ್ಯಾಸ. ಜಾತಿಯ ಪರಿಧಿಯನ್ನು ಮೀರಿ ಅಸ್ಮಿತೆ ಬೆಳೆಸಿಕೊಳ್ಳುವುದು ಕಷ್ಟ. ಆದರೂ, ಜಾತಿಯನ್ನು ಮೀರಿ ಬೆಳೆಯುವ ಶಕ್ತಿಯನ್ನು ದಲಿತರು ಬೆಳೆಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.
`ಒಳ್ಳೆಯ ಕವಿಯೊಬ್ಬ ತನ್ನ ಕಾವ್ಯದ ಮೂಲಕ ಪ್ರಸಿದ್ಧಿ ಪಡೆಯದೇ ಇರುವ ಸಾಧ್ಯತೆ ಇದೆ. ಜನರಿಗೆ ಪರಿಚಿತರಾಗದೇ ಇರುವ ಹಲವು ಅತ್ಯುತ್ತಮ ಕವಿಗಳು ಸಮಾಜದಲ್ಲಿದ್ದಾರೆ. ಕವಿ ಗೋಪಾಲಕೃಷ್ಣ ಅಡಿಗ ಅವರಿಗೆ ಡಾ.ಯು.ಆರ್. ಅನಂತಮೂರ್ತಿ, ಸಿದ್ಧಲಿಂಗಯ್ಯ ಅವರಿಗೆ ಚಿಂತಕ ಡಿ.ಆರ್. ನಾಗರಾಜ್ ಸಿಗದೇ ಹೋಗಿದ್ದರೆ ಅವರ ಕಾವ್ಯಗಳು ಹೆಚ್ಚು ಪ್ರಸಿದ್ಧಿ ಪಡೆಯುತ್ತಿರಲಿಲ್ಲ' ಎಂದರು.
`ಸರ್ಕಾರದ ಪ್ರಶಸ್ತಿಗಳು ಜಾತಿಕರಣಗೊಳ್ಳುವುದು ತಪ್ಪು. ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಪ್ರದಾನ ಮಾಡುವ ಪ್ರಶಸ್ತಿಯನ್ನು ಅವರ ಸಮುದಾಯದವರಿಗೆ ಮಾತ್ರ ನೀಡುವುದು ಬದಲಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ನಾಡಿನ ಮೂಲ ಸಂಸ್ಕೃತಿ ಕೂಡ ಭ್ರಷ್ಟವಾಗುತ್ತಿದೆ. ಉತ್ತರಾಖಂಡದಲ್ಲಿ ನಡೆದ ಜಲಪ್ರಳಯದಲ್ಲಿ ಭಕ್ತರ ಅಸಹಾಯಕತೆಯನ್ನು ಸ್ಥಳೀಯರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶಕ್ಕೆ `ಜ್ಞಾನಭಾಗ್ಯ' ನೀಡುವ ಅಗತ್ಯವಿದೆ. ವಿದ್ಯೆಯಿಂದ ವಿವೇಕ ಬರಲು ಸಾಧ್ಯವಿಲ್ಲ.
ಶಿಕ್ಷಣದಿಂದ ವಿವೇಕ ಬಂದಿದ್ದರೆ ವೈದ್ಯರು ಮಡೆ ಸ್ನಾನದಲ್ಲಿ ಎಂಜಲು ಎಲೆಯ ಮೇಲೆ ಉರುಳಾಡುತ್ತಿರಲಿಲ್ಲ' ಎಂದು ಅವರು ಹೇಳಿದರು.
ಕವಿ ಪ್ರೊ.ಟಿ. ಯಲ್ಲಪ್ಪ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹರಿಹರ ಆನಂದಸ್ವಾಮಿ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆಯ ಸೋಮಯ್ಯ ಮಲೆಯೂರು, ರಂಗವಾಹಿನಿಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೆಂಪನಪುರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.