ADVERTISEMENT

ದೇಶಭಕ್ತ ಎನಿಸಿಕೊಳ್ಳಲು ಹಿಂದೂ ಆಗಬೇಕಿಲ್ಲ

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 7:29 IST
Last Updated 19 ಜೂನ್ 2017, 7:29 IST
ಇತಿಹಾಸಕಾರ ರಾಮಚಂದ್ರ ಗುಹಾ ಅವರು ಕೆಪಿಸಿಸಿ ಉಪಾಧ್ಯಕ್ಷ ಬಿ.ಕೆ.ಚಂದ್ರಶೇಖರ್‌ ಅವರೊಂದಿಗೆ ಮಾತನಾಡಿದರು
ಇತಿಹಾಸಕಾರ ರಾಮಚಂದ್ರ ಗುಹಾ ಅವರು ಕೆಪಿಸಿಸಿ ಉಪಾಧ್ಯಕ್ಷ ಬಿ.ಕೆ.ಚಂದ್ರಶೇಖರ್‌ ಅವರೊಂದಿಗೆ ಮಾತನಾಡಿದರು   

ಮೈಸೂರು: ದೇಶಭಕ್ತ ಎನಿಸಿಕೊಳ್ಳಲು ಹಿಂದೂ ಆಗಬೇಕಿಲ್ಲ, ಹಿಂದಿ ಭಾಷೆಯನ್ನೇ ಮಾತನಾಡಬೇಕಿಲ್ಲ ಮತ್ತು ಪಾಕಿಸ್ತಾನವನ್ನು ದ್ವೇಷಿಸಲೇಬೇಕಿಲ್ಲ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಭಾನುವಾರ ಹೇಳಿದರು. ಮೈಸೂರು ಲಿಟರರಿ ಅಸೋಸಿಯೇಷನ್‌ ನಗರದಲ್ಲಿ ಏರ್ಪಡಿಸಿದ್ದ ಮೈಸೂರು ಸಾಹಿತ್ಯ ಉತ್ಸವದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ಮತ್ತು ರವೀಂದ್ರನಾಥ್‌ ಟ್ಯಾಗೋರ್‌ ಪರಿಚಯಿಸಿದ್ದ ರಾಷ್ಟ್ರವಾದ ಈಗ ಅರ್ಥ ಕಳೆದುಕೊಂಡಿದೆ. ಸಾವರ್ಕರ್‌ ಮತ್ತು ಗೋಳ್ವಾಲ್ಕರ್‌ ಅವರ ರಾಷ್ಟ್ರವಾದದ ಕಲ್ಪನೆಗೆ ಪ್ರಚಾರ ದೊರೆಯುತ್ತಿದೆ ಎಂದರು.

ಮಹಾತ್ಮ ಗಾಂಧಿ ಮತ್ತು ಟ್ಯಾಗೋರ್‌ ಅವರು ಯುರೋಪಿಯನ್ ಮಾದರಿಯ ರಾಷ್ಟ್ರೀಯತೆಗೆ ಬದಲಾಗಿ ಹೊಸ ಮಾದರಿಯ ರಾಷ್ಟ್ರೀಯತೆ ಪರಿಚಯಿಸಿದ್ದರು. ದಲಿತ ಮತ್ತು ಬ್ರಾಹ್ಮಣ, ಪುರುಷ ಮತ್ತು ಮಹಿಳೆ ಸಮಾನರು ಎಂದು ಗಾಂಧೀಜಿ ಸಾರಿದ್ದರು ಎಂದು ಹೇಳಿದರು.

ADVERTISEMENT

ಪ್ರಸ್ತುತ ರಾಜಕೀಯದಲ್ಲಿ ನಡೆಯುತ್ತಿರುವ ಚರ್ಚೆಗೆ ಇತಿಹಾಸವನ್ನು ಎಳೆದು ತರಬಾರದು. ಬಲಪಂಥೀಯರು ಇತಿಹಾಸವನ್ನು ಪುನರ್‌ರಚಿಸಲು ಹೊರಟಿದ್ದಾರೆ. ಎಡಪಂಥೀಯರು ರಾಜಕೀಯದ ಚರ್ಚೆಗಾಗಿ ಇತಿಹಾಸ­ವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದರು.

ಇತಿಹಾಸಕಾರನ ಒಂದು ಕೆಲಸ ನಿರ್ಣಾಯಕ ಅಲ್ಲ. ಅದು ಆ ಕ್ಷಣಕ್ಕೆ ಮಾತ್ರ ನಿರ್ಣಾಯಕ ಎನಿಸುತ್ತದೆ. ಇತಿಹಾಸಕಾರ ತನಗೆ ದೊರೆತ ಮೂಲಗಳನ್ನು ಆಧರಿಸಿ ಕೃತಿ ರಚಿಸುವನು. ಇನ್ನೊಬ್ಬನಿಗೆ ಉತ್ತಮ ಮೂಲಗಳು ಸಿಕ್ಕರೆ ಆತ ರಚಿಸಿದ ಕೃತಿ ಅದಕ್ಕೂ ಉತ್ತಮವಾಗಿ ಮೂಡಿ­ಬರಬಹುದು ಎಂದು ನುಡಿದರು.

ಇತಿಹಾಸಕಾರರು ತತ್ವಶಾಸ್ತ್ರದಿಂದ ಮಾಹಿತಿ ತೆಗೆದುಕೊಳ್ಳಬಾರದು. ಅರ್ಥಶಾಸ್ತ್ರ, ಸಮಾಜ ವಿಜ್ಞಾನದಿಂದ ಮಾಹಿತಿ ಕಲೆ ಹಾಕಬೇಕು. ಆದರೆ ಇವೆರಡನ್ನು ಅತಿಯಾಗಿ ಅವಲಂಬಿಸಿ­ದರೂ ಅಪಾಯವಿದೆ ಎಂದು ಕಿವಿಮಾತು ಹೇಳಿದರು.

ಇತಿಹಾಸಕಾರರು ಮುದ್ರಿತ ದಾಖಲೆಗಳು ಮತ್ತು ಸರ್ಕಾರದ ಕಡತಗಳನ್ನು ಹೆಚ್ಚಾಗಿ ಅವಲಂಬಿ­ಸುವರು. ಆದರೆ ಉತ್ತಮ ಇತಿಹಾಸಕಾರ ಎನಿಸಿಕೊಳ್ಳಬೇಕಿದ್ದರೆ ಸರ್ಕಾರೇತರ ದಾಖಲೆಗಳನ್ನು ನೋಡಬೇಕು. ಪತ್ರಿಕೆಗಳು ಹಾಗೂ ಇತರ ಮೂಲಗಳಿಂದ ಮಾಹಿತಿ ಕಲೆ ಹಾಕಬೇಕು ಎಂದು ಸಲಹೆ ನೀಡಿದರು.

ಇತಿಹಾಸಕಾರ ಒಂದು ಸಿದ್ಧಾಂತವನ್ನು ಅನುಕರಿಸಬಾರದು. ಎಡಪಂಥೀಯ ಅಥವಾ ಬಲಪಂಥೀಯನೇ ಆದರೂ ಸ್ವತಂತ್ರ ಚಿಂತನೆ, ಅಲೋಚನೆ ಹೊಂದಿರುವುದು ಮುಖ್ಯ. ಒಂದೇ ಸೈದ್ಧಾಂತಿಕ ಚೌಕಟ್ಟಿಗೆ ತನ್ನನ್ನು ಸೀಮಿತವಾಗಿರಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ನನ್ನ ಕೃತಿಗಳಿಗೆ ರಾಮಾಯಣ ಮಾದರಿ: ಸಾಹಿತ್ಯ ಉತ್ಸವ ಉದ್ಘಾಟಿಸಿ ಮಾತ­ನಾಡಿದ ಸಾಹಿತಿ ಎಸ್‌.ಎಲ್‌.ಭೈರಪ್ಪ, ‘ನನ್ನ ಎಲ್ಲ ಕೃತಿಗಳಿಗೆ ರಾಮಾಯಣ ಮತ್ತು ಮಹಾಭಾರತ ಮಾದರಿಯಾಗಿವೆ’ ಎಂದರು.

ರಷ್ಯನ್‌, ಜರ್ಮನ್‌, ಸ್ಪ್ಯಾನಿಷ್‌, ಇಟಲಿಯನ್‌ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನ ಮಾಡಿದ್ದೇನೆ. ಆದರೆ ರಾಮಾಯಣ ಮತ್ತು ಮಹಾಭಾರತಕ್ಕಿಂತ ಉತ್ತಮ ಸಾಹಿತ್ಯ ಮಾದರಿ ನನಗೆ ಎಲ್ಲೂ ದೊರೆಯಲಿಲ್ಲ ಎಂದು ಹೇಳಿದರು.

ವೇದಗಳು ಭಾರತದ ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಅಡಿಪಾಯ ಆಗಿವೆ. ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರ ವೇದಗಳ ಅವಿಭಾಜ್ಯ ಅಂಗಗಳು. ಬ್ರಹ್ಮಸೂತ್ರವನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವುದು ಕಷ್ಟ. ರಾಮಾಯಣ ಮತ್ತು ಮಹಾಭಾರತ ಓದಿದರೆ ವೇದಗಳ ಬಗ್ಗೆ ತಿಳಿದು­ಕೊಳ್ಳಬಹುದು. ಏಕೆಂದರೆ ವಾಲ್ಮೀಕಿ ಮತ್ತು ವ್ಯಾಸ ಅವರು ವೇದಗಳ ಕಾಲದಲ್ಲಿ ಜೀವಿಸಿದ್ದರು ಎಂದು ವಿವರಿಸಿದರು.

ಇಂದಿನ ಬರಹಗಾರರು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ವಿಷಯ ಮತ್ತು ಸಮಾಜ ವಿಜ್ಞಾನ ಕುರಿತ ವಿಷಯಗಳ ನಡುವಿನ ವ್ಯತ್ಯಾಸ ಕಂಡುಕೊಳ್ಳಲು ವಿಫಲ­ರಾಗಿದ್ದಾರೆ. ಇದರಿಂದಾಗಿ ಉತ್ತಮ ಕೃತಿಗಳು ಮೂಡಿಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

‘ನಾನು 12 ವರ್ಷ ಉತ್ತರ ಭಾರತದಲ್ಲಿದ್ದೆ. ಅಲ್ಲಿದ್ದುಕೊಂಡು ಕನ್ನಡದಲ್ಲಿ ಕಾದಂಬರಿ ರಚಿಸುವುದು ಕಷ್ಟ ಎಂಬುದು ಮನವರಿಕೆಯಾದ ಕಾರಣ ಕರ್ನಾಟಕಕ್ಕೆ ಬಂದೆ’ ಎಂದರು.
ಮೈಸೂರು ಲಿಟರರಿ ಅಸೋಸಿಯೇಷನ್‌ ಅಧ್ಯಕ್ಷ ಪ್ರೊ.ಕೆ.ಸಿ.ಬೆಳ್ಳಿಯಪ್ಪ, ಶಶಿ ದೇಶಪಾಂಡೆ, ಗೀತಾ ಕಾರಿಯಪ್ಪ, ಕಾವೇರಿ ನಂಬಿಸನ್‌, ಡಾ.ಎಚ್‌.ಎಸ್‌.ಶಿವಣ್ಣ, ಕೆ.ಬಿ.ಗಣಪತಿ, ಆರ್‌.ವಿ.ರಾಜನ್‌ ಹಾಜರಿದ್ದರು.

* * 

ಇತಿಹಾಸಕಾರ ರಾಷ್ಟ್ರವಾದಿಯೇ ಆಗಬೇಕಿಲ್ಲ. ದೇಶವು ಏನಾದರೂ ತಪ್ಪು ಮಾಡಿದ್ದಲ್ಲಿ ಅದನ್ನು ಮುಚ್ಚಿಡುವ ಕೆಲಸ ಮಾಡಬಾರದು
ರಾಮಚಂದ್ರ ಗುಹಾ
ಇತಿಹಾಸಕಾರ

* * 

ತತ್ವಶಾಸ್ತ್ರವನ್ನು ಸರಿಯಾಗಿ ಅಧ್ಯಯನ ಮಾಡದ ಬರಹಗಾರರು ಗೊಂದಲಕ್ಕೆ ಸಿಲುಕಿದ್ದಾರೆ. ಸಾಹಿತ್ಯ ಮತ್ತು ತತ್ವಶಾಸ್ತ್ರಕ್ಕೆ ಪರಸ್ಪರ ಸಂಬಂಧ ಇದೆ
ಎಸ್‌.ಎಲ್.ಭೈರಪ್ಪ
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.