ADVERTISEMENT

ದೊಡ್ಡಕಮರವಳ್ಳಿ: ಕೃಷಿ ಕಣ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2013, 8:41 IST
Last Updated 20 ಮಾರ್ಚ್ 2013, 8:41 IST

ಪಿರಿಯಾಪಟ್ಟಣ: ರೈತರು ಬೆಳೆ ಹಸನು ಮಾಡುವ ಸಂದರ್ಭದಲ್ಲಿ ಬೆಳೆ ಹಾಳಾಗುವುದನ್ನು ತಪ್ಪಿಸಲು ಕೃಷಿ ಕಣ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು. 

ತಾಲ್ಲೂಕಿನ ದೊಡ್ಡಕಮರವಳ್ಳಿ ಗ್ರಾಮದಲ್ಲಿ ಎಪಿಎಂಸಿ ವತಿಯಿಂದ ರೂ.7 ಲಕ್ಷ ವೆಚ್ಚದಲ್ಲಿ ರೈತ ಕೃಷಿ ಕಣ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಅನುದಾನಗಳು ರೈತರಿಗೆ ಅನುಕೂಲವಾದಾಗ ಮಾತ್ರ ಯೋಜನೆಗಳು ಸಾರ್ಥಕವಾಗುತ್ತದೆ. ರೈತರು ಸಂಕಷ್ಟದ ಪರಿಸ್ಥಿತಿಯ ಎದುರಿಸುತ್ತಿದ್ದು, ಸತತ 3 ವರ್ಷಗಳ ತೀವ್ರ  ಬರಗಾಲದ ನಡುವೆಯೂ ಅಲ್ಪಸ್ವಲ್ಪ ಬೆಳೆ ಬೆಳೆದು ಜೀವನೋಪಾಯಕ್ಕಾಗಿ ಉಪಯೋಗಿಸುತ್ತಿದ್ದಾರೆ. ಹೊಲದಲ್ಲಿ ಬೆಳೆ ಸ್ವಚ್ಛಗೊಳಿಸುವಾಗ ಬೆಳೆ ಭೂಮಿ ಪಾಲಾಗುತ್ತದೆ. ಇದನ್ನು ತಪ್ಪಿಸಲು ರೈತ ಕೃಷಿ ಕಣ ನಿರ್ಮಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.  ಎಪಿಎಂಸಿ ಅಧ್ಯಕ್ಷ ಕೆ.ಹೊಲದಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಆರ್.ಗೋಪಾಲ್, ತಾಲ್ಲೂಕು ಎಸ್‌ಸಿ ಘಟಕದ ಅಧ್ಯಕ್ಷ ಪಿ.ಮಹದೇವ್, ಮುಖಂಡರಾದ ಎಸ್.ಸಿ.ಕಷ್ಣಪ್ಪ, ಪ್ರಕಾಶ್, ಶೇಖರ್, ಇಓ ಆರ್.ಕಾಂತರಾಜ್ ಇದ್ದಾರೆ.

ಅನುದಾನ ಸದ್ಬಳಕೆಗೆ ಕರೆ
ಕೆ.ಆರ್.ನಗರ: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಹೆಣ್ಣುಮಕ್ಕಳಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಎನ್‌ಪಿಇಜಿಇಎಲ್ ವತಿಯಿಂದ  ಈಚೆಗೆ ಏರ್ಪಡಿಸಿದ್ದ ವೃತ್ತಿ ಕೌಶಲ್ಯಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ ಅಲ್ಪಸಂಖ್ಯಾತ ಮಕ್ಕಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಉರ್ದು ಶಾಲೆಗಳಲ್ಲಿ ದಾಖಲಾಗಬೇಕಾಗಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ, ಬಿಆರ್‌ಪಿ ನವೀನ್‌ಕುಮಾರ್, ಶಿವಶಂಕರ್, ಸಿಆರ್‌ಪಿ ಪೂರ್ಣಿಮ, ಮುಖ್ಯಶಿಕ್ಷಕಿ ಅಖಿಲಾ ಖಾನಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.