ADVERTISEMENT

ನಂಜನಗೂಡು ತಾಲ್ಲೂಕು ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 17 ಮೇ 2012, 9:00 IST
Last Updated 17 ಮೇ 2012, 9:00 IST

ಮೈಸೂರು: ನಂಜನಗೂಡು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಉಸ್ತುವಾರಿಯಲ್ಲಿರುವ ಜಿಲ್ಲೆಗೆ ಸೇರಿದ ಈ ತಾಲ್ಲೂಕು ಆಸ್ಪತ್ರೆ ಸಮಸ್ಯೆಗಳನ್ನು ಹೊಂದಿದೆ.

ತಾಲ್ಲೂಕು ಕಚೇರಿಯ ಆವರಣದಿಂದ ನಂಜನಗೂಡು ಬಸ್ ಡಿಪೋ ಮುಂಭಾಗದ ಹೊಸ ಕಟ್ಟಡಕ್ಕೆ 2002ರಲ್ಲಿ ಸ್ಥಳಾಂತರಗೊಂಡ ಈ ಆಸ್ಪತ್ರೆ ನೂರು ಹಾಸಿಗೆಗಳನ್ನು ಹೊಂದಿದೆ. ಸಾರ್ವಜನಿಕ ಆಸ್ಪತ್ರೆಯಾದ ಮೇಲೂ ತುರ್ತು ಚಿಕಿತ್ಸೆಗಾಗಿ ಕಾಯುತ್ತಲೇ ಇದೆ. ಈ ಆಸ್ಪತ್ರೆಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಮೀಣದ ಜನರು ಬರುತ್ತಾರೆ.

ಹುದ್ದೆಗಳು ಖಾಲಿ ಇವೆ
ಈ ಆಸ್ಪತ್ರೆಗೆ 10 ವೈದ್ಯ ಹುದ್ದೆಗಳು ಮಂಜೂರಾಗಿವೆ. ಈಗ ಏಳು ಮಂದಿ ವೈದ್ಯರಿದ್ದಾರೆ. ಒಬ್ಬರು ಆಡಳಿತ ವೈದ್ಯಾಧಿಕಾರಿಯಾದರೆ, ಮತ್ತೊಬ್ಬರು ಗ್ರಾಮೀಣ ಭಾಗದಲ್ಲಿ ನಡೆಯುವ ಕುಷ್ಠರೋಗ ಅರಿವು ಮೂಡಿಸುವ ಶಿಬಿರಕ್ಕೆ ಹೋಗುತ್ತಾರೆ. ಉಳಿದ ನಾಲ್ವರಲ್ಲಿ ಇಬ್ಬರು ರಜೆಗೆ ಹೋದರೆ ಆಸ್ಪತ್ರೆಯ ಪರಿಸ್ಥಿತಿ ಅಧೋಗತಿ.

`ಫಿಜಿಷಿಯನ್, ಅರಿವಳಿಕೆ, ನೇತ್ರ ಹಾಗೂ ಮೂಳೆಗೆ ಸಂಬಂಧಿಸಿದ ತಜ್ಞ ವೈದ್ಯರು, ರೇಡಿಯೋಲಜಿಸ್ಟ್ ಹುದ್ದೆಗಳು ಆರು ತಿಂಗಳುಗಳಿಂದ ಖಾಲಿ ಇವೆ. ಹಿರಿಯ ಫಾರ್ಮಸಿಸ್ಟ್ (ಔಷಧ ವಿತರಕ) ಹಾಗೂ ಕಿರಿಯ ಪ್ರಯೋಗಶಾಲಾ ತಂತ್ರಜ್ಞರ ಒಂದು ಹುದ್ದೆ ಬಹಳ ದಿನಗಳಿಂದ ಖಾಲಿ ಇದೆ.
 
ಕಿರಿಯ ಪುರುಷ ಆರೋಗ್ಯ ಸಹಾಯಕರ 3, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ 2 ಹುದ್ದೆಗಳು ಖಾಲಿ ಇವೆ. ಸರ್ಕಾರವು ಆದೇಶಿಸಿದರೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬಹುದು, ಆದರೆ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ~ ಎಂದು ಆಡಳಿತ ವೈದ್ಯಾಧಿಕಾರಿ ಎಸ್.ವಿಜಯ್‌ಕುಮಾರ್ ಹೇಳುತ್ತಾರೆ.

ಸಮಸ್ಯೆಗಳ ಸರಮಾಲೆ
ಸ್ಕ್ಯಾನಿಂಗ್ ಯಂತ್ರದ ಸ್ಥಿತಿ ಚಾಲಕನಿಲ್ಲದ ವಾಹನದಂತಾಗಿದೆ. ಎಕ್ಸ್‌ರೆ ಯಂತ್ರ ಮೂರು ದಿನಗಳಿಗೊಮ್ಮೆ ರಿಪೇರಿಗೆ ಬರುತ್ತಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಿಬ್ಬಂದಿ. ಪಟ್ಟಣದ ಎರಡು ಖಾಸಗಿ ಲ್ಯಾಬ್‌ಗಳತ್ತ ಜನರು ಮುಖ ಮಾಡಬೇಕಿದೆ. ಉದರ ದರ್ಶಕ ಶಸ್ತ್ರಚಿಕಿತ್ಸೆ (ಲ್ಯಾಪ್ರೋಸ್ಕೋಪಿ)ಯನ್ನು ತಿಂಗಳ ಎರಡನೇ ಸೋಮವಾರ ಮಾಡಲಾಗುತ್ತದೆ.
 
ಟ್ಯುಬ್ಯಾಕ್ಟಮಿ ಶಸ್ತ್ರಚಿಕಿತ್ಸೆಯನ್ನು ಪ್ರತಿ ಶುಕ್ರವಾರ ಮಾಡಲಾಗುತ್ತದೆ. 24 ಗಂಟೆಗಳು ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಸೌಲಭ್ಯವಿದ್ದರೂ, ಅವುಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಇಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಇರಬೇಕಾದ ಬ್ಲಡ್ ಸ್ಟೋರೇಜ್(ರಕ್ತ ದಾಸ್ತಾನು) ಕೇಂದ್ರಕ್ಕೆ ಪ್ರತ್ಯೇಕ ಕೊಠಡಿ ಹಾಗೂ ಕಟ್ಟಡವಿಲ್ಲ. ಆಸ್ಪತ್ರೆಗೆ ಪ್ರತಿನಿತ್ಯ 500-600 ಮಂದಿ ಬರುತ್ತಾರೆ. ಅವರಿಗೆ ಸರಿಯಾದ ಕ್ಯಾಂಟೀನ್ ವ್ಯವಸ್ಥೆ ಇಲ್ಲ.

ಬೆಳಿಗ್ಗೆ ವಿದ್ಯುತ್ ಇಲ್ಲದಿದ್ದರೆ ಸಮಸ್ಯೆ ಅಷ್ಟಾಗಿ ಇರುವುದಿಲ್ಲ. ರಾತ್ರಿ ವೇಳೆ ವಿದ್ಯುತ್ ಕೈಕೊಟ್ಟರೆ ತಾತ್ಕಾಲಿಕ ಲೈಟ್, ಮೇಣದಬತ್ತಿಯೇ ಗತಿ. ಜನರೇಟರ್ ಇದ್ದರೂ ಅದು ಅಳವಡಿಸಿಲ್ಲ. ಶಸ್ತ್ರಚಿಕಿತ್ಸೆಯ ಸಂದರ್ಭಗಳಲ್ಲಿ ಕರೆಂಟ್ ಹೋದರೆ ರೋಗಿ ಮತ್ತು ವೈದ್ಯರಿಗೆ ಪ್ರಾಣ ಸಂಕಟ.

ಇವರು ಏನಂತಾರೆ?

ಪ್ರಸೂತಿ ತಜ್ಞರು ಬೇಕು
ತಾಲ್ಲೂಕು ಆಸ್ಪತ್ರೆಗೆ ಇನ್ನೊಬ್ಬ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಅವಶ್ಯಕತೆಯಿದೆ. ಆಸ್ಪತ್ರೆಯ ದೂರವಾಣಿ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದರೂ ಸಿಬ್ಬಂದಿ ಸಂಜೆ 5ಗಂಟೆ ತನಕ ಮಾತ್ರ ಇರುತ್ತಾರೆ. ನಂತರ ಬಂದ ಕರೆಗಳನ್ನು ಸ್ವೀಕರಿಸುವವರು ಇರುವುದಿಲ್ಲ. ಇನ್ನು ಮುಂದೆ ಸ್ಟಾಫ್‌ನರ್ಸ್‌ಗಳು ಕರೆಗಳನ್ನು ಸ್ವೀಕರಿಸುವಂತೆ ವ್ಯವಸ್ಥೆ ಮಾಡಲಾಗುವುದು.
-ಡಾ.ಎಸ್.ವಿಜಯ್‌ಕುಮಾರ್, ಆಡಳಿತ ವೈದ್ಯಾಧಿಕಾರಿ

ಅಲೆದಾಟ ತಪ್ಪಿಲ್ಲ
ನಾನು ಸೊಂಟ ನೋವಿನಿಂದ ಬಳಲು
ತ್ತಿದ್ದು, ಮೂರು ದಿನಗಳಿಂದ ತಾಲ್ಲೂಕು ಆಸ್ಪತ್ರೆಗೆ ಅಲೆಯು ತ್ತ್ದ್ದಿದೇನೆ. ಎಕ್ಸ್ ರೇ ಮಷಿನ್ ಕೆಟ್ಟು ಹೋಗಿದೆ, ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ. ಇದು ನಾಲ್ಕನೇ ದಿನ, ಆದರೂ ಅದೇ ಗೋಳು. ನಾನು ಆಸ್ಪತ್ರೆ ಖರ್ಚಿಗೆ ತಂದಿದ್ದ ರೂ. 400 ಖಾಸಗಿಯಾಗಿ ಎಕ್ಸ್ ರೇ ಹೋಯ್ತು. ಈಗ ಬಸ್ ಚಾರ್ಜ್‌ಗೆ ದುಡ್ಡಿಲ್ಲ. ಯಾರಾದರೂ ನಮ್ಮೂರಿನವರು ಸಿಕ್ಕಿದರೆ ಸಾಲ ಮಾಡಬೇಕು.
-ಸಿದ್ದಪ್ಪ, ಹೊಸಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT