ADVERTISEMENT

ನಗರ ನಿರ್ವಹಣೆಯಲ್ಲಿ ಸ್ಥಳೀಯ ಸಂಸ್ಥೆಗಳು ವಿಫಲ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:10 IST
Last Updated 7 ಜನವರಿ 2012, 6:10 IST

ಮೈಸೂರು: ವಿಶ್ವವಿದ್ಯಾಲಯ ವ್ಯಾಪ್ತಿಯ ಪರಿಸರ ಮತ್ತು ಜಲಮೂಲಗಳನ್ನು ಒತ್ತುವರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  ಜರುಗಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕುಲಪತಿಗಳಿಗೆ ಸೂಚಿಸಿದ್ದಾರೆ.

`ಈ ರೀತಿಯ ಅಧಿಕಾರ ಕುಲಪತಿಗಳಿಗೆ ಇದೆ. ಮೈಸೂರು ವಿವಿ ವ್ಯಾಪ್ತಿಯ ಕೆರೆಯ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ರಕ್ಷಣೆ ಮಾಡಿ. ಅದಕ್ಕಾಗಿ ನಾನು ನಿಮ್ಮಂದಿಗೆ ಇದ್ದೇನೆ~ ಎಂದು ಅವರು ಹೇಳಿದರು.

ನಗರದಲ್ಲಿ ಶುಕ್ರವಾರ ಕೇಂದ್ರ ನಗರಾಭಿವೃದ್ಧಿ ಇಲಾಖೆ, ನಗರ ಯೋಜನಾ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿವಿ. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಯೋಜನೆ ಮತ್ತು ಅಭಿವೃದ್ಧಿ 2025; ಸವಾಲುಗಳು ಮತ್ತು ಹೆಜ್ಜೆಗಳು~ ಕುರಿತು ಆಯೋಜಿಸಲಾಗಿರುವ 60ನೇ ರಾಷ್ಟ್ರೀಯ ನಗರ ಮತ್ತು ರಾಷ್ಟ್ರೀಯ ಯೋಜನಾ ಕಾಂಗ್ರೆಸ್ ಮೂರು ದಿನಗಳ ಸಮ್ಮೇಳನ ಉದ್ಘಾಟಿಸಿದ ಅವರು ಮಾತನಾಡಿದರು.

`ಮುಂಬರುವ ದಿನಗಳಲ್ಲಿ ನೀರು ಮತ್ತು ವಿದ್ಯುತ್ ಸಮಸ್ಯೆಯು ಉಲ್ಬಣಗೊಳ್ಳುವುದು ಖಚಿತ. ಜಲ ಮತ್ತು ವಿದ್ಯುತ್ ಶಕ್ತಿಗಳನ್ನು ಪುನರ್ಬಳಕೆ ಮತ್ತು ಸಂರಕ್ಷಣೆ ಮಾಡುವ ಕುರಿತು ಯೋಜನೆ ರೂಪಿಸುವವರು ಚಿಂತಿಸಬೇಕು. ಇವತ್ತು ಜಲಮೂಲಗಳು ಅತಿಕ್ರಮಣಗೊಳ್ಳುತ್ತಿದ್ದು ಅವುಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ~ ಎಂದು ಹೇಳಿದರು.

`ಬೆಂಗಳೂರಿನ ಅಭಿವೃದ್ಧಿಯ ಕುರಿತು ಅಧಿಕಾರಿಯೊಬ್ಬರಿಂದ ನಾನು ವರದಿ ಪಡೆದಿದ್ದೇನೆ. ಜಲಮೂಲಗಳಾದ ಕೆರೆಕಟ್ಟೆಗಳು ಅತಿಕ್ರಮಣಗೊಂಡಿವೆ. ರಿಯಲ್ ಎಸ್ಟೇಟ್‌ನವರು ದೊಡ್ಡ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ. ಕಸ ನಿರ್ವಹಣೆಯೂ ಸೂಕ್ತವಾಗಿ ನಡೆಯುತ್ತಿಲ್ಲ. ಪರಿಸರ ಮಾಲಿನ್ಯಗೊಂಡಿದೆ. ದಿನದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. ಇದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ~ ಎಂದು ತಿಳಿಸಿದರು.

`ನಿಮ್ಮ ಯೋಜನೆ, ಅಹವಾಲುಗಳಿಗೆ ಸರ್ಕಾರ ಕಿವಿಗೊಡಲಿಲ್ಲವೆಂದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದರ್ಥ. ಶಿಸ್ತು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದಿದ್ದರೆ ಒಳ್ಳೆಯ ವ್ಯಕ್ತಿಗಳು ತೊಂದರೆಗೊಳಗಾಗುತ್ತಾರೆ. ಬಾಹುಬಲ ಮತ್ತು ಹಣಬಲ ಇರುವವರು ಮಾತ್ರ ದುರ್ಬಲರ ಮೇಲೆ ಆಕ್ರಮಣ ಮಾಡುತ್ತಾರೆ. ಅದನ್ನು ತಡೆಯಬೇಕು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.