ADVERTISEMENT

ನಾಲ್ಕು ದಿನ ಗುಡುಗು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 12:40 IST
Last Updated 1 ಜೂನ್ 2013, 12:40 IST

ಮೈಸೂರು: ಜಿಲ್ಲೆಯಲ್ಲಿ ಜೂನ್ 1ರಿಂದ 4ರವರೆಗೆ ನಾಲ್ಕು ದಿನ ಗುಡುಗುಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ ತಿಳಿಸಿದೆ.

ಮಳೆಯು 23ರಿಂದ 28 ಮಿಲಿ ಮೀಟರ್ ಬರುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29ರಿಂದ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 18ರಿಂದ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ. ಬೆಳಗಿನ ಗಾಳಿಯ ತೇವಾಂಶ ಶೇ 84ರಿಂದ 86ರವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ 74ರಿಂದ 76ರವರೆಗೆ ಇರಲಿದೆ. ಗಾಳಿಯು ಗಂಟೆಗೆ ಸರಾಸರಿ 5ರಿಂದ 6 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ರೈತರು ಅನುಸರಿಸಬೇಕಾದ ವಿವರ:
* ಮುಂಗಾರು ಮಳೆ ಸಮಯದಲ್ಲಿ ಜಾನುವಾರುಗಳಿಗೆ ಗಂಟಲು ಬೇನೆ ಮತ್ತು ಚಪ್ಪೆರೋಗ ಬರುವ ಸಾಧ್ಯತೆ ಹೆಚ್ಚು. ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು.

* ತೋಟಗಾರಿಕೆ ಬೆಳೆಗಳಿಗೆ ಪಾತಿ ಮಾಡಿ, ಸಸಿಗಳ ಬುಡದಿಂದ 3 ಅಡಿ ಅಂತರದಲ್ಲಿ ನಿಗದಿತ ಪ್ರಮಾಣದ ರಸಗೊಬ್ಬರವನ್ನು ಹಾಕಿ ಮಣ್ಣು ಮುಚ್ಚಬೇಕು.

* ಸಾಕಷ್ಟು ಮಳೆ ಬಂದಿರುವ ಪ್ರದೇಶಗಳಲ್ಲಿ ಜಮೀನನ್ನು ರೈತರು ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಿ, ಬಿತ್ತನೆಗೆ ಸೂಕ್ತ ರೀತಿಯಲ್ಲಿ ತಯಾರಿಸಿಕೊಳ್ಳಬೇಕು.

* ಮಳೆ ಬಂದಿರುವುದರಿಂದ ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದ್ದು ಇತ್ಯಾದಿ ಬೆಳೆಗಳನ್ನು ಸೂಕ್ತ ಪ್ರದೇಶಗಳಲ್ಲಿ ಬಿತ್ತನೆ ಮಾಡಬಹುದು.

ಹೆಚ್ಚಿನ ಮಾಹಿತಿಗೆ ಸಾವಯವ ಕೃಷಿ ಸಂಶೋಧನಾ ಕೇಂದ್ರದ ದೂರವಾಣಿ: 0821-2591267, ಮೊ: 99166 20803 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.