ADVERTISEMENT

ನಿಯಮ ಮೀರಿದರೆ ಲೈಸೆನ್ಸ್ ರದ್ದು: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 8:55 IST
Last Updated 10 ಫೆಬ್ರುವರಿ 2011, 8:55 IST

ಮೈಸೂರು: ‘ಅವಧಿಗಿಂತ ಮೊದಲು ಇಲ್ಲವೇ ಅವಧಿ ಮುಗಿದ ನಂತರ ತೆರೆದಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳ ಲೈಸನ್ಸ್ ಅನ್ನು ರದ್ದುಪಡಿಸಲಾಗುವುದು’ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಬುಧವಾರ ಎಚ್ಚರಿಸಿದರು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳ ಸಭೆಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೆಲವೊಂದು ಬಾರ್ ಮತ್ತು ರೆಸ್ಟೋರೆಂಟ್‌ಗಳು ಬೆಳಿಗ್ಗೆ 6 ಗಂಟೆಗೇ ತೆರೆದಿರುತ್ತವೆ. ಇನ್ನು ಕೆಲವು ರಾತ್ರಿ 11.30 ರ ನಂತರವೂ ವ್ಯಾಪಾರ ಮಾಡುತ್ತಿರುತ್ತವೆ. ಇದು ನನ್ನ ಗಮನಕ್ಕೆ ಬಂದಿದೆ.  ಇವರೆಡೂ ಅಬಕಾರಿ ನೀತಿ ಉಲ್ಲಂಘನೆ ಆಗುವುದರಿಂದ ಅಂತಹ ಬಾರ್ ಮತ್ತು ರೆಸ್ಟೋರೆಂಟ್‌ಗಳ ಲೈಸನ್ಸ್ ರದ್ದುಗೊಳಿಸಲಾಗುವುದು’ ಎಂದರು ಹೇಳಿದರು.

‘ಪ್ರತಿ ತಾಲ್ಲೂಕಿಗೆ ಎರಡು ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ಕೊಡಲಾಗುತ್ತಿದ್ದು, ಈಗ 443 ಅಂಗಡಿಗಳು ಇವೆ. ಹೆಚ್ಚಿಗೆ ಬೇಡಿಕೆ ಬಂದರೆ ಪರಿಶೀಲಿಸಲಾಗುವುದು.ಎಂಎಸ್‌ಐಎಲ್ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ  ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವುದು ಗಮನಕ್ಕೆ ಬಂದಿದೆ. ಎಂಆರ್‌ಪಿ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬೆಂಗಳೂರಿನಲ್ಲಿ ಪ್ರತಿ ತಿಂಗಳು ಅಬಕಾರಿ ಅಧಿಕಾರಿಗಳ ಸಭೆಯನ್ನು ನಡೆಸಿ ಆಯಾ ಜಿಲ್ಲೆಯ ಮಾಹಿತಿಯನ್ನು  ಪಡೆಯುತ್ತಿದ್ದೇನೆ. ಅಲ್ಲದೇ ಈಗ ಎಲ್ಲ ವಿಭಾಗಗಳಿಗೂ ಭೇಟಿ ಕೊಡುತ್ತಿದ್ದೇನೆ. ಇದು ಎರಡನೇ ವಿಭಾಗ ಮಟ್ಟದ  ಸಭೆಯಾಗಿದೆ. ಕಳ್ಳಬಟ್ಟಿ ಮತ್ತು ನಕಲಿ ಮದ್ಯ ತಯಾರಿಕೆಯನ್ನು ತಡೆಗಟ್ಟುವುದು ಸಭೆಯ ಉದ್ದೇಶವಾಗಿದೆ’ ಎಂದ  ಅವರು, ‘ನಾನು ಯಾವುದೇ ಲಾಬಿಗೆ ಮಣಿದು ಲೈಸನ್ಸ್ ರದ್ದು ಮಾಡುವ ಪ್ರಶ್ನೆಯೇ ಇಲ್ಲ’ ಎಂದರು.

‘ನನಗೆ ಯಾರಿಂದಲೂ ಜೀವ ಬೆದರಿಕೆ ಬಂದಿಲ್ಲ. ಒಂದು ವೇಳೆ ಬಂದರೂ ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ. ನಾನು ಸಾಮಾನ್ಯ ಕುಟುಂಬದಿಂದ ಮೇಲೆ ಬಂದವನು. ನನ್ನ ಮೇಲೆ 50 ರಿಂದ 60 ಕೇಸುಗಳಿದ್ದವು. ಹೊನ್ನಾಳಿ ಯಿಂದ ಬೆಂಗಳೂರು ತನಕ ಪಾದಯಾತ್ರೆ ನಡೆಸಿದ್ದೇನೆ. ಆದ್ದರಿಂದ ಯಾವುದೇ ಬೆದರಿಕೆಗೆ ಹೆದರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.