ADVERTISEMENT

ನಿರ್ವಹಣೆ ಕೊರತೆ: ಒಣಗಿ ನಿಂತ ಸಸಿಗಳು

ಮೇಟಿಕುಪ್ಪೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಒತ್ತುವರಿ ಜಮೀನು ತೆರವು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2016, 6:44 IST
Last Updated 5 ಆಗಸ್ಟ್ 2016, 6:44 IST
ಎಚ್.ಡಿ.ಕೋಟೆ ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಒತ್ತುವರಿ ತೆರವು ಮಾಡಿಸಿದ್ದ ಜಮೀನಿನಲ್ಲಿ ದನಕರುಗಳು ಮೇಯುತ್ತಿರುವುದು
ಎಚ್.ಡಿ.ಕೋಟೆ ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಒತ್ತುವರಿ ತೆರವು ಮಾಡಿಸಿದ್ದ ಜಮೀನಿನಲ್ಲಿ ದನಕರುಗಳು ಮೇಯುತ್ತಿರುವುದು   

ಎಚ್.ಡಿ.ಕೋಟೆ: ತಾಲ್ಲೂಕಿನ ಮೇಟಿ ಕುಪ್ಪೆ ಗ್ರಾಮದ ಬಳಿ ಒತ್ತುವರಿ ಮಾಡಿ ಕೊಂಡಿದ್ದ ಅರಣ್ಯದ ಜಮೀನು ತೆರವು ಗೊಳಿಸಿದ ಅರಣ್ಯ ಇಲಾಖೆಯು ಅಲ್ಲಿ ಸಸಿಗಳನ್ನು ನೆಡಲಾಗಿತ್ತು. ಆದರೆ, ನಿರ್ವ ಹಣೆಯಿಲ್ಲದೇ ಸಸಿಗಳು ಹಾಳಾಗಿವೆ.

ಗ್ರಾಮದ ಸರ್ವೆ ನಂ. 18 ರಲ್ಲಿ ಸುಮಾರು 150 ಎಕರೆ ಜಮೀನು ಇದ್ದು, ಹಿಂದಿನಿಂದಲೂ ಆದಿವಾಸಿ ಗಿರಿಜನರು ಸೇರಿದಂತೆ ಅನೇಕರು, 1 ಎಕರೆ, 2 ಎಕರೆ  ಜಮೀನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಅರಣ್ಯ ಒತ್ತುವರಿ ಕಾನೂನು ಬಂದ ಮೇಲೆ ಇಲಾಖೆಯವರು ಎಲ್ಲಾ ಜಮೀನು ಒತ್ತುವರಿ ತೆರವುಗೊಳಿಸಿದರು.
ರೈತರು ಬೆಳೆ ಬೆಳೆದು ಬೇಸಾಯ ಮಾಡುತ್ತಿದ್ದ ಕೃಷಿ ಭೂಮಿಯಲ್ಲಿ ಸಸಿ ನೆಟ್ಟು ಹೋದವರು ಇತ್ತ ತಿರುಗಿಯೂ ನೋಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಸುಮಾರು 1 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಸಸಿಗಳನ್ನು ನೆಟ್ಟು ಜಮೀನಿನ ಸುತ್ತಲೂ ಕಂದಕ ನಿರ್ಮಾಣ ಮಾಡಲಾಯಿತು. ಆದರೆ, ಸಸಿ ನೆಟ್ಟು ಅರಣ್ಯ ಇಲಾಖೆ ಮತ್ತೆ ಈ ಕಡೆ ಸುಳಿಯಲಿಲ್ಲ. ಈಗ ಅಲ್ಲಿ ಗ್ರಾಮದ ಅನೇಕರು ಕಂದಕವನ್ನು ಮುಚ್ಚಿ, ದನ ಕರುಗಳನ್ನು ಮೇಯಲು ಬಿಡುತ್ತಿದ್ದಾರೆ.

ಇದರಿಂದ ಅಲ್ಲಿ ನೆಟ್ಟಿದ್ದ ಸಸಿಗಳು ಇನ್ನೇನು ನೆಲಕಚ್ಚುವ ಹಂತದಲ್ಲಿದೆ. ಈ ಬಗ್ಗೆ ಪ್ರಾದೇಶಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಅವರಿಗೆ ತೆರವು ಮಾಡಿಸಿರುವ ಜಮೀನಿನಲ್ಲಿ ಇರುವ ಸಸಿಗಳನ್ನು ರಕ್ಷಣೆಗೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಗಿಡಗಳು ದಿನೇ ದಿನೇ ಹಾಳಾಗುತ್ತಿವೆ. ಈಚಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಸಸಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ. ಇಷ್ಟೊತ್ತಿಗೆ ಸಸಿಗಳು ಉತ್ತಮವಾಗಿ ಬೆಳವಣಿಗೆ ಕಾಣುತ್ತಿದ್ದವು ಎಂದಿದ್ದಾರೆ ಗ್ರಾಮಸ್ಥರು.

‘ಸದರಿ ಜಮೀನುಗಳನ್ನು ಅರಣ್ಯ ಇಲಾಖೆ ಒತ್ತುವರಿ ಎಂದು ತೆರವು ಗೊಳಿಸಿದೆ. ಆದರೆ, ಹೈಕೋರ್ಟ್ ಆದೇಶ ದಂತೆ 3 ಎಕರೆ ಪ್ರದೇಶಕ್ಕೆ ಹೆಚ್ಚು ಜಮೀನು ಹೊಂದಿದ್ದ ರೈತರ ಜಮೀನನ್ನು ತೆರವುಗೊಳಿಸಬೇಕಿತ್ತು. ಇಲ್ಲಿ ಸುಮಾರು ಹತ್ತಾರು ವರ್ಷಗಳಿಂದ ಅರ್ಧ ಎಕರೆ, ಒಂದು ಎಕರೆ ಹಾಗೂ ಎರಡು ಎಕರೆ ಜಮೀನು ಮಾಡಿ ಕೊಂಡಿದ್ದ ರೈತರನ್ನು ತೆರವುಗೊಳಿಸ ಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಜನಾರ್ದನ್ ಹೇಳಿದರು.

‘ಸರ್ಕಾರದ ಆದೇಶದಂತೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ. ಅಲ್ಲಿ ಸಸಿಗಳನ್ನು ನೆಡಲಾಗಿದೆ. ಕಂದಕ ನಿರ್ಮಾಣ ಮಾಡಲಾಗಿದೆ. ಮೇಟಿಕುಪ್ಪೆ ಗ್ರಾಮದ ಅನೇಕರು, ಕಾಡಿಗೆ ಜಾನುವಾ ರುಗಳನ್ನು ಬಿಡುತ್ತಿಲ್ಲವಾದ್ದರಿಂದ ಜಾನು ವಾರುಗಳಿಗೆ ಮೇಯಲು ಅವಕಾಶ ಕೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ಅಲ್ಲಿ ಜಾನು ವಾರುಗಳಿಗೆ ಮೇಯಲು ಅವಕಾಶ ಮಾಡಿಕೊಡಲಾಗಿದೆ. ಸದ್ಯಕ್ಕೆ ಅಲ್ಲಿ ನೆಟ್ಟಿರುವ ಸಸಿಗಳು ಹಾಳಾಗುತ್ತಿರುವ ಬಗ್ಗೆ ತಮಗೆ ಮಾಹಿತಿ ಇದೆ. ಅವುಗಳ ಉಳಿವಿಗೂ ಕ್ರಮ ತೆಗೆದುಕೊಳ್ಳ ಲಾಗುವುದು’ ಎನ್ನುತ್ತಾರೆ ಅರಣ್ಯಾ ಧಿಕಾರಿ ಪುಟ್ಟಸ್ವಾಮಿ.
- ಸತೀಶ್ ಬಿ.ಆರಾಧ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.