ADVERTISEMENT

ಪರಿಹಾರಕ್ಕೆ ಆಗ್ರಹಿಸಿ ಸಂಬಂಧಿಕರ ಧರಣಿ

ಅರಣ್ಯ ಇಲಾಖೆ ದಿನಗೂಲಿ ನೌಕರ ಸಾವು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:25 IST
Last Updated 10 ಏಪ್ರಿಲ್ 2013, 6:25 IST

ಪಿರಿಯಾಪಟ್ಟಣ: ಅರಣ್ಯ ಇಲಾಖೆ ದಿನಗೂಲಿ ನೌಕರ ಮುತ್ತುರಾಜು ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ್ದ್ದಿದು ಪರಿಹಾರ ನೀಡುವಂತೆ ಒತ್ತಾಯಿಸಿ ಕುಟುಂಬದವರು ಮಂಗಳವಾರ ಧರಣಿ ನಡೆಸಿದರು.

ತಾಲ್ಲೂಕಿನ ಮುತ್ತೂರು ಅರಣ್ಯ ವ್ಯಾಪ್ತಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಮುತ್ತುರಾಜು (35) ಕೆಲ ದಿನಗಳ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ಪೆಟ್ಟಾಗಿತ್ತು. ಹಾಸನದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಂಗಳವಾರ ಆತ ಕೊನೆಯುಸಿರೆಳೆದಿದ್ದ.

ಕುಟುಂಬಕ್ಕೆ ಆಧಾರವಾಗಿದ್ದ ಈತನ ಮರಣದಿಂದ ಪತ್ನಿ ಮತ್ತು ಇಬ್ಬರು ಮಕ್ಕಳು ಬೀದಿಪಾಲಾಗಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರು ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮಾತನಾಡಿ ಮುತ್ತುರಾಜು ಕಳೆದ ಡಿಸೆಂಬರ್ ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗಿದ್ದ. ಅಲ್ಲದೇ ದಿನಗೂಲಿ ನೌಕರರ ಮರಣಕ್ಕೆ ಇಲಾಖೆಯಿಂದ ಯಾವುದೇ ಪರಿಹಾರ ಒದಗಿಸುವ ಯೋಜನೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮು ಮಾತನಾಡಿ, ಪ್ರಾಣದ ಹಂಗು ತೊರೆದು ಅರಣ್ಯದಲ್ಲಿ ಕೆಲಸ ನಿರ್ವಹಿಸುವ ಸಾವಿರಾರು ದಿನಗೂಲಿ ನೌಕರರ ಜೀವನ ಭದ್ರತೆಯ ಬಗ್ಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಮುಂದಿನ ದಿನಗಳ್ಲ್ಲಲಾದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರಲ್ಲದೇ ವೈಯಕ್ತಿವಾಗಿ ಬಡ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಚಿಣ್ಣಪ್ಪ ವೈಯಕ್ತಿಕವಾಗಿ ರೂ. 5 ಸಾವಿರವನ್ನು ಮೃತನ ಕುಟುಂಬಕ್ಕೆ ನೀಡಿದರು. ಹರಿಲಾಪುರದ ಕೃಷ್ಣಯ್ಯ, ಕಾಂಗ್ರೆಸ್ ಎಸ್‌ಸಿಎಸ್‌ಟಿ ಘಟಕದ ಅಧ್ಯಕ್ಷ ಪಿ.ಮಹದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.