ADVERTISEMENT

ಪೊಲೀಸರ ಅಡ್ಡಿ: ಕಾರ್ಯಕ್ರಮ ಮೊಟಕು

ಬುದ್ಧ–ಬಸವ–ಅಂಬೇಡ್ಕರ್‌ ಜನ್ಮದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:31 IST
Last Updated 29 ಏಪ್ರಿಲ್ 2018, 13:31 IST

ಮೈಸೂರು: ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬುದ್ಧ–ಬಸವ–ಅಂಬೇಡ್ಕರ್ ಜಯಂತಿ ಅಂಗವಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ‘ಸಂವಿಧಾನ ಉಳಿಸಿ’ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಪೊಲೀಸರ ಮಧ್ಯಪ್ರವೇಶದಿಂದ ಅರ್ಧಕ್ಕೆ ಮೊಟಕುಗೊಂಡಿತು. ಜತೆಗೆ, ಪೊಲೀಸರೊಂದಿಗೆ ಮಾತಿನ ಚಕಮಕಿಯಲ್ಲದೆ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯೂ ನಡೆಯಿತು.

ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅವರು ಮಾತನಾಡುವ ಸಮಯಕ್ಕೆ ಬಂದ ಪೊಲೀಸರು ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದರು. ಅವರು ಮಾತು ಮುಗಿಸುವಷ್ಟರಲ್ಲಿ ಪೊಲೀಸರು ವೇದಿಕೆ ಏರಿದರು. ಅಲ್ಲಿಗೆ ಕಾರ್ಯಕ್ರಮ ಕೊನೆಗೊಂಡಿತು. ನಂತರ ಊಟ ವಿತರಣೆಯನ್ನೂ ನಿಲ್ಲಿಸಲು ಮುಂದಾದರು.

‘ಏ.16ರಂದು ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದರೂ ಕೊಡಲಿಲ್ಲ. ಬುದ್ಧ–ಬಸವ– ಅಂಬೇಡ್ಕರ್‌ ಜಯಂತಿ ಆಚರಿಸಲು ಚುನಾವಣಾ ಆಯೋಗದ ಅನುಮತಿ ಕೇಳಬೇಕಾದ ಅಗತ್ಯವಿಲ್ಲ. ಕಾರ್ಯಕ್ರಮ ಏರ್ಪಡಿಸಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದೇವೆ. ಈಗ ನೀವು ಬಂದು ತೊಂದರೆ ಕೊಡುತ್ತಿದ್ದೀರಿ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆ ಜನರು ಬಂದಿದ್ದಾರೆ. ಊಟ ಮಾಡಲು ಅವಕಾಶ ಕೊಡಿ’ ಎಂದು ಹಿರಿಯ ಸಮಾಜವಾದಿ ಪ.ಮಲ್ಲೇಶ್‌ ಕೋರಿದರು.

ADVERTISEMENT

‘ರಾಜಕೀಯ ಪಕ್ಷಗಳು ತಮ್ಮ ಸಮಾವೇಶಗಳಲ್ಲಿ ಪರಸ್ಪರ ಕೆಟ್ಟ ಪದಗಳಿಂದ ಬೈದಾಡಿಕೊಳ್ಳುತ್ತಾರೆ. ಜಾಹೀರಾತು ನೀಡಿ ಬೈಯುತ್ತಿದ್ದಾರೆ. ಇದಕ್ಕೆ ಚುನಾವಣಾ ಆಯೋಗ ಏನು ಕ್ರಮ ಕೈಗೊಂಡಿದೆ? ನಾವು ಸೈದ್ಧಾಂತಿಕವಾಗಿ ಜಯಂತಿ ಆಚರಿಸುತ್ತಿದ್ದೇವೆ’ ಎಂದರು.

ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿಲ್ಲ ಎಂದು ದೇವರಾಜ ಠಾಣೆ ಇನ್‌ಸ್ಪೆಕ್ಟರ್‌ ಶಾಂತಾರಾಮ್‌ ಆಕ್ಷೇಪಿಸಿದರು. ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ’ ಎಂದು ನೋಡೆಲ್‌ ಅಧಿಕಾರಿ ಎಲ್‌.ಎನ್‌.ಆನಂದ್‌ ಹೇಳಿದರು.

‘ಏನು ಉಲ್ಲಂಘನೆಯಾಗಿದೆ?’ ಎಂದು ಪ.ಮಲ್ಲೇಶ್‌ ಪ್ರಶ್ನಿಸಿದರು. ‘ಕೋಮುವಾದದ ಕುರಿತು ಚರ್ಚೆ ನಡೆಯುತ್ತಿದೆ ಎಂಬ ದೂರು ಬಂತು’ ಎಂದು ಆನಂದ್‌ ಉತ್ತರಿಸಿದರು. ‘ಕೋಮುವಾದದ ಬಗ್ಗೆ ಮಾತನಾಡುವ ಹಕ್ಕಿದೆ. ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಲ್ಲದೆ ಊಟಕ್ಕೂ ಅಡ್ಡಿಪಡಿಸಿದಿರಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕಾರ್ಯಕ್ರಮ ಕುರಿತು ವಿಡಿಯೊ ಮಾಡಲಾಗಿದೆ. ಪರಿಶೀಲಿಸಿ ಕೈಗೊಳ್ಳುವುದಾಗಿ’ ಆನಂದ್‌ ತಿಳಿಸಿದರು.

ಮೋದಿ ಕನ್ನಡಿಗರೇ?

‘ನಾನೂ ಕನ್ನಡಿಗ ಪ್ರಧಾನಿ ಎಂದು ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವ ಅವರು ಹೇಗೆ ಕನ್ನಡಿಗರಾಗುತ್ತಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಪ್ರಶ್ನಿಸಿದರು.

‘ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಆಯಾ ರಾಜ್ಯಗಳ ಭಾಷೆಗಳಲ್ಲಿ ಉತ್ತರಿಸಬಹುದಿತ್ತು. ಆದರೆ, ಮೋದಿ ಪ್ರಧಾನಿಯಾದ ನಂತರ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಹಿಂದಿ ಇಲ್ಲವೆ ಇಂಗ್ಲಿಷಿನಲ್ಲಿ ಮಾತ್ರ ಉತ್ತರಿಸಬೇಕಿದೆ. 2014ರಲ್ಲಿ ನಡೆದ ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ 7 ಸಾವಿರ ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ಕನ್ನಡಿಗರ ಸಂಖ್ಯೆ 340 ಮಾತ್ರ. 2017ರಲ್ಲಿ 9 ಸಾವಿರ ಹುದ್ದೆಗಳಿಗೆ ಆಯ್ಕೆ ನಡೆದಿದ್ದು, ಕೇವಲ 460 ಕನ್ನಡಿಗರು ಆಯ್ಕೆಯಾದರು. ಇದು ಮೋದಿಯವರ ಕನ್ನಡತನವೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈಲ್ವೆ, ಬಿಇಎಲ್, ಬಿಎಚ್‌ಇಎಲ್‌ ಇತರೆಡೆಗಳ ಆಯ್ಕೆ ಪರೀಕ್ಷೆಗಳಲ್ಲಿ ಕನ್ನಡವನ್ನು ಕಿತ್ತು ಹಾಕಿ ಹಿಂದಿ, ಇಂಗ್ಲಿಷ್‌ ಮಾತ್ರ ಉಳಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಗಡೆ ಟೆಸ್ಟ್ ಡೋಸ್‌

‘ಸಂವಿಧಾನ ಬದಲಾಯಿಸುತ್ತೇವೆಂದ ತಿಳಿಗೇಡಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಟೆಸ್ಟ್‌ ಡೋಸ್‌ ಇದ್ದಂತೆ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ ಹೇಳಿದರು.

‘ಶಸ್ತ್ರಚಿಕಿತ್ಸೆಗೆ ಮುನ್ನ ಟೆಸ್ಟ್‌ ಡೋಸ್‌ ಕೊಡಲಾಗುತ್ತದೆ. ಅದರಿಂದ ಅಡ್ಡಪರಿಣಾಮಗಳಿಲ್ಲ ಎಂಬುದು ಖಚಿತವಾದರೆ ಮುಂದುವರಿಯಲಾಗುತ್ತದೆ. ಹಾಗೆ ಸಂವಿಧಾನ ಬದಲಾಯಿಸಬೇಕು ಎನ್ನುವ ಹೆಗಡೆ ಕೊಟ್ಟ ಟೆಸ್ಟ್‌ ಡೋಸ್‌ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇದ್ದಾರೆ’ ಎಂದು ಆರೋಪಿಸಿದರು.

**
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ವಿರೋಧಿ. ದಲಿತರನ್ನು ನಾಯಿಗಳೆನ್ನುವ ಅವರು, ಪ್ರಗತಿಪರರು, ಬುದ್ಧಿಜೀವಿಗಳ ತಂದೆ–ತಾಯಿ ಗೊತ್ತಿಲ್ಲ ಎನ್ನುತ್ತಾರೆ. ಅವರ ತಂದೆ– ತಾಯಿ ಯಾರು? 
– ದಿನೇಶ್‌ ಅಮಿನ್‌ಮಟ್ಟು, ಪತ್ರಕರ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.