ADVERTISEMENT

ಪ್ರತಾಪಸಿಂಹ ವಿರುದ್ಧ ದೂರು

ಪ್ರಚೋದನಾಕಾರಿ ಭಾಷಣ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಮೈಸೂರು: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮೈಸೂರು–ಕೊಡುಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ವಿರುದ್ಧ ಇಲ್ಲಿನ ಎರಡು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರಮೂರ್ತಿ ಅವರು ದೇವರಾಜ ಠಾಣೆಗೆ ದೂರು ನೀಡಿದ್ದಾರೆ.

‘ಪಾಕಿಸ್ತಾನದ ಗಡಿಯಲ್ಲಿ ಭಾರತದ ಇಬ್ಬರು ಯೋಧರ ಶಿರಚ್ಛೇದನವಾದಾಗ ಪ್ರಧಾನಿ ಮನಮೋಹನ ಸಿಂಗ್‌ ಅವರು ಸಣ್ಣ ಪ್ರತಿರೋಧವನ್ನೂ ತೋರಲಿಲ್ಲ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ನಾಲ್ವರ ಶಿರಚ್ಛೇದನ ಮಾಡಿ ಎಂದು ನಮ್ಮ ಸೈನಿಕರಿಗೆ ಹೇಳಬಹುದಿತ್ತು’ ಎಂದು ಪ್ರತಾಪಸಿಂಹ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾಮಪತ್ರ ಸಲ್ಲಿಸಿದ ಬಳಿಕವೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇದೇ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ ಎಂದು ಜಿಲ್ಲಾ ನಗರ ಕಾಂಗ್ರೆಸ್‌ ಸಮಿತಿಯ ಮಾಧ್ಯಮ ಸಂಚಾಲಕ ಎಂ. ಲಕ್ಷ್ಮಣ್‌ ಅವರು ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.