ADVERTISEMENT

ಪ್ರತಿ ಠಾಣೆಗೆ 10 ಸೈಕಲ್: ಸುಧೀರ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 5:35 IST
Last Updated 16 ಜುಲೈ 2012, 5:35 IST

ಮೈಸೂರು: `ನಗರದ ಎಲ್ಲ ಪೊಲೀಸ್ ಠಾಣೆಗಳಿಗೆ ತಲಾ 10 ಸೈಕಲ್‌ಗಳನ್ನು ವಿತರಿಸಲು ಚಿಂತನೆ ನಡೆದಿದೆ~ ಎಂದು ನಗರ ಪೊಲೀಸ್ ಕಮಿಷನರ್ ಕೆ.ಎಲ್. ಸುಧೀರ್ ತಿಳಿಸಿದರು.

ರೋಟರಿ ಉತ್ತರ, ಪೊಲೀಸ್ ಇಲಾಖೆ ಕೆ.ಆರ್.ವಿಭಾಗ, ಬಿಜಿಎಸ್ ಅಪೋಲೊ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಗರದ ಸರಸ್ವತಿಪುರಂನ ವಿಜಯ ವಿಠಲ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪೊಲೀಸ್ ಸಿಬ್ಬಂದಿ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

`ಸೈಕಲ್ ಬಳಕೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಸೈಕಲ್‌ನಲ್ಲಿ ಗಸ್ತು ತಿರುಗುವುದರಿಂದ ಸಾರ್ವಜನಿಕರೊಂದಿಗೆ ಸಂಪರ್ಕ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ದಾನಿಗಳ ಮುಖೇನ ಪ್ರತಿ ಠಾಣೆಗೆ ತಲಾ 10 ಸೈಕಲ್‌ಗಳನ್ನು ವಿತರಿಸಲಾಗುವುದು. ಪ್ರಥಮವಾಗಿ ಸರಸ್ವತಿಪುರಂ ಠಾಣೆಗೆ ಪ್ರಾಯೋಜಕರು 6 ಸೈಕಲ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ~ ಎಂದು ತಿಳಿಸಿದರು.

`ಪೊಲೀಸರು ಸದಾ ಒತ್ತಡದಿಂದ ಕೆಲಸ ನಿರ್ವಹಿಸುತ್ತಾರೆ. ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮದ ಮೂಲಕ ಪೊಲೀಸರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸಮಯದ ಅಭಾವ ನೆಪವೊಡ್ಡಿ ವ್ಯಾಯಾಮ ನಿರ್ಲಕ್ಷಿಸಿದರೆ ಆರೋಗ್ಯ ಹದಗೆಡುತ್ತದೆ. ಆರೋಗ್ಯ ಚೆನ್ನಾಗಿಲ್ಲದಿದ್ದರೆ ಕೆಲಸಕ್ಕೆ ಅಡ್ಡಿಯಾಗುತ್ತದೆ~ ಎಂದರು.

ರೋಟರಿ ವಲಯ-7 ಲೆಫ್ಟಿನೆಂಟ್ ಯಶಸ್ವಿನಿ ಸೋಮಶೇಖರ್ ಮಾತನಾಡಿ, `ಚೀನಾದಲ್ಲಿ ಶೇ 50 ಮಂದಿ ಸೈಕಲ್ ಬಳಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಸೈಕಲ್ ಬಳಕೆ ಬಗ್ಗೆ ನಿಧಾನಗತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ.

ಪೊಲೀಸ್ ಸಿಬ್ಬಂದಿಗೆ ಸೈಕಲ್‌ಗಳನ್ನು ವಿತರಣೆ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಪೊಲೀಸರು ಈಚಿನ ದಿನಗಳಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಇಲಾಖೆ ಚಿಂತನೆ ಮಾಡಬೇಕು~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 20 ಮಂದಿ ಪೊಲೀಸರು ರಕ್ತದಾನ ಮಾಡಿದರು. ಸರಸ್ವತಿಪುರಂ ಠಾಣೆ ಎಸ್‌ಐ ತಿಮ್ಮರಾಜು ಸೇರಿದಂತೆ 35 ಮಂದಿ ನೇತ್ರದಾನ ಮಾಡಲು ಹೆಸರು ನೋಂದಾಯಿಸಿದರು. ಕೆ.ಆರ್.ಠಾಣೆ ವಿಭಾಗದ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರಾಯೋಜಕರು 6 ಸೈಕಲ್ ಕೀಲಿಗಳನ್ನು ಕಮಿಷನರ್ ಸುಧೀರ್ ಅವರಿಗೆ ಹಸ್ತಾಂತರಿಸಿದರು.

ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಂ.ರತ್ನರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೈ.ಆರ್.ಮಂಜುನಾಥ್, ಸಮುದಾಯ ಸೇವೆ ನಿರ್ದೇಶಕ ಡಿ.ಬಿ.ರಾಜಶೇಖರಮೂರ್ತಿ, ಅಪೋಲೊ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಎಚ್.ಎಸ್.ಸೋಮನಾಥ್, ಡಿಸಿಪಿ (ಅಪರಾಧ ಮತ್ತು ಸಂಚಾರ) ಕೆ.ಪಿ.ಭೀಮಯ್ಯ, ಸರಸ್ವತಿಪುರಂ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT