ADVERTISEMENT

ಪ್ರವಾಸಿಗರ ಮನಸೆಳೆದ `ಚುಂಚನಕಟ್ಟೆ'

ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 9:00 IST
Last Updated 20 ಜೂನ್ 2013, 9:00 IST
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮ ಸಮೀಪದ ಚುಂಚನಕಟ್ಟೆ ಗ್ರಾಮದ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಕಾವೇರಿ ನದಿಯು ಉಕ್ಕಿ ಹರಿಯುತ್ತಿರುತ್ತಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮ ಸಮೀಪದ ಚುಂಚನಕಟ್ಟೆ ಗ್ರಾಮದ ಧನುಷ್ಕೋಟಿ ಮತ್ತು ಸೀತಾಮಡುವಿನಲ್ಲಿ ಕಾವೇರಿ ನದಿಯು ಉಕ್ಕಿ ಹರಿಯುತ್ತಿರುತ್ತಿದೆ.   

ಸಾಲಿಗ್ರಾಮ: ಕೆ.ಆರ್. ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಪುರಾಣ ಪ್ರಸಿದ್ಧ ಕೋದಂಡರಾಮ ದೇವಾಲಯದ ಎಡಬದಿಯಲ್ಲಿ ಧುಮ್ಮಿಕ್ಕಿ ಹರಿಯುವ  ಕಾವೇರಿಯ ರುದ್ರರಮಣೀಯ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ಮಡಿಕೇರಿ ಜಿಲ್ಲೆಯಲ್ಲಿ ವರ್ಷಧಾರೆ ಆರಂಭವಾಗುತ್ತಿದ್ದಂತೆ ರೈತರ ಜೀವನಾಡಿ ಕಾವೇರಿ ಬೋರ್ಗರೆದು ಬರುವ ಹಾದಿಯಲ್ಲಿ ಕೆ.ಆರ್.ನಗರ   ತಾಲ್ಲೂಕಿನ ಚುಂಚನಕಟ್ಟೆ ಗ್ರಾಮ ಪ್ರವೇಶಿಸುತ್ತಿದ್ದಂತೆ ಧನುಷ್ಕೋಟಿ ಕಾವೇರಿಗೆ ರುದ್ರರಮಣೀಯ ನೃತ್ಯವನ್ನು ಮಾಡಿಸಿಯೇ ಮುಂದೆ ಮುಂದೆ ಸಾಗುತ್ತಿದ್ದಾಳೆ.

ಕೋದಂಡರಾಮ, ಸೀತಾಮಾತೆ ಹಾಗೂ ಲಕ್ಷ್ಮಣ ಮೂರು ಮಂದಿ ವನವಾಸ ಮಾಡುತ್ತಿದ್ದ ದಿನಗಳಲ್ಲಿ ಚುಂಚನಕಟ್ಟೆ ಗ್ರಾಮದಲ್ಲೂ ತಂಗಿದ್ದರೂ ಎಂಬುದಕ್ಕೆ ಕಾವೇರಿ ನದಿಯಲ್ಲಿ ಇರುವ ಧನುಷ್ಕೋಟಿ ಸಾಕ್ಷಿಯಾಗಿದೆ. ವನವಾಸದ ದಿನಗಳಲ್ಲಿ ಸೀತಾಮಾತೆ ಕೋದಂಡರಾಮನಿಗೆ ನೀರು ಬೇಕು ಎಂದು ಕೇಳಿದಾಗ ಬಾಣ ಬಿಟ್ಟು ಜಲಧಾರೆ ಸಿಗುವಂತೆ ಮಾಡಿದ್ದ ಸ್ಥಳವೇ ಧನುಷ್ಕೋಟಿ ಎಂದು ಹೇಳಲಾಗುತ್ತಿದೆ. ಈ ಸ್ಥಳದಲ್ಲೇ ಕಾವೇರಿ ಧುಮ್ಮಿಕ್ಕಿ ಹರಿದು ಹೋಗುವಾಗ ನದಿಯ ನೀರು ಮೂರು ಬಣ್ಣಗಳಿಂದ ಕಾಣಿಸುತ್ತದೆ. ಇದನ್ನು ನೋಡಿದರೆ ಶುಭವಾಗುತ್ತದೆ ಎಂದು ನಂಬಿರುವ ಮಹಿಳೆಯರು ಇಂದಿಗೂ ಮಳೆಗಾಲ ಬಂದಾಗ ಚುಂಚನಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಕಾವೇರಿಗೆ ಪೂಜೆ ಸಲ್ಲಿಸಿ ಧನುಷ್ಕೋಟಿಯಲ್ಲಿ ಸಿಂಚನವಾಗುವ ನೀರಿನ ಸ್ಪರ್ಶ ಪಡೆದುಕೊಂಡು ಹೋಗುತ್ತಾರೆ.

ಕಳೆದ ಮೂರು ದಿನಗಳಿಂದ ಕಾವೇರಿ ನದಿಯಲ್ಲಿ ಒಳ ಹರಿವು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಚುಂಚನಕಟ್ಟೆ ಗ್ರಾಮದ ಕಾವೇರಿ ನದಿಯಲ್ಲಿನ ಧನುಷ್ಕೋಟಿಗೆ ಜೀವ ಕಳೆ ಬಂದಿದ್ದು, ಹೆಚ್ಚು ಪ್ರವಾಸಿಗರನ್ನು ತನ್ನತ್ತಾ ಸೆಳೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.