ADVERTISEMENT

`ಪ್ರೊ.ರಾಮದಾಸ್ ಪ್ರಭಾವ: ಚಿಂತಕರು ಹೆಚ್ಚಲಿ'

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 8:36 IST
Last Updated 24 ಜೂನ್ 2013, 8:36 IST

ಮೈಸೂರು: `ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದ ರಾಮದಾಸ್ ಚಿಂತನೆಗಳ ಪ್ರಭಾವದಿಂದ ಚಿಂತಕರ ಸಂಖ್ಯೆ ಹೆಚ್ಚಾಗಬೇಕು' ಎಂದು ಮುಖ್ಯಮಂತ್ರಿ ಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ತಿಳಿಸಿದರು. ಡಾ.ರಾಮಮನೋಹರ ಲೋಹಿಯಾ ಟ್ರಸ್ಟ್ ಹಾಗೂ ಸಾಂಸ್ಕೃತಿಕ ಸಂಸ್ಥೆ ದೇಸಿರಂಗ ಭಾನುವಾರ ನಗರದ ರಂಗಾಯಣದಲ್ಲಿ ಏರ್ಪಡಿಸಿದ `ಪ್ರೊ.ರಾಮದಾಸ್ ನೆನಪಿನಲಿ...' ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ವಿಜೃಂಭಿಸುತ್ತಿರುವ ಕೋಮುವಾದ ಹಾಗೂ ಜಾತಿವಾದ, ಮಠಗಳಿಗೆ ಸರ್ಕಾರ ದುಡ್ಡು ಕೊಡುವ, ನೈತಿಕ ಪೊಲೀಸ್‌ಗಿರಿ ಕಂಡಾಗ ರಾಮದಾಸ್ ಇದ್ದರೆ ಚಳವಳಿಯನ್ನು ಹುಟ್ಟು ಹಾಕುತ್ತಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವಾಗ ಪ್ರೊ. ರಾಮದಾಸ್ ಇರಬೇಕಿತ್ತು. ನಿಷ್ಠುರ ವಾದಿ, ಮುಲಾಜಿಲ್ಲದೆ, ಸತ್ಯವನ್ನು ಹೇಳುವ ಎದೆಗಾರಿಕೆಯನ್ನು ಹಾಗೂ ಅಂಥ ಶಕ್ತಿಯನ್ನು ಉಳಿಸಿ ಕೊಂಡಿದ್ದರು' ಎಂದು ಅಭಿಪ್ರಾಯ ಪಟ್ಟರು.
`ಜಾತಿ ಸ್ಥಾವರವಾದರೆ ವರ್ಗ ಜಂಗಮ ಎಂದು ರಾಮಮನೋಹರ ಲೋಹಿಯಾ ಹೇಳುತ್ತಿದ್ದರು. ವ್ಯಕ್ತಿ ತನ್ನ ಶ್ರಮ ಹಾಗೂ ಪ್ರಯತ್ನದ ಮೂಲಕ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹೋಗಬಹುದು. ಆದರೆ, ಜಾತಿ ಬದಲಾಗದು' ಎಂದರು.

`ಜಾತಿ ಬೇಡ ಎನ್ನುವುದು ಪುರೋಗಾಮಿತನ. ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ಜಾತಿ ನಾಶವಾಗಬೇಕಾದರೆ ಜಾತಿ ಇದೆ ಎಂದು ಒಪ್ಪಿಕೊಳ್ಳಬೇಕು. ಮೀಸಲಾತಿ ಮೂಲ ಉದ್ದೇಶ ಜಾತಿ ನಾಶ. ಸಮಾನತೆಗಾಗಿ ಭೂಸುಧಾರಣೆ ತರಲಾಯಿತು. ಇದರೊಂದಿಗೆ ಶಿಕ್ಷಣ ಕೊಟ್ಟರೆ ಮೂಢನಂಬಿಕೆ ಹಾಗೂ ಜಾತಿವ್ಯವಸ್ಥೆ ಹೊಡೆದೋಡಿಸಬಹುದು ಎಂದು ಜಾರಿಗೆ ತರಲಾಯಿತು. ಆದರೆ, ಕುಕ್ಕೆಸುಬ್ರಹ್ಮಣ್ಯದಲ್ಲಿ ಎಂಜಲೆಲೆ ಮೇಲೆ ಉರುಳಾಡುವವರು ಶಿಕ್ಷಿತರು. ಟಿವಿಯಲ್ಲಿ ಭವಿಷ್ಯ ಹೇಳುವವರಿಗೆ ಪ್ರಶ್ನೆ ಕೇಳುವವರು ಶಿಕ್ಷಿತರು' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

`ಅಂತರಜಾತಿ ವಿವಾಹ ಮತ್ತು ಪ್ರೊ.ಕೆ. ರಾಮದಾಸ್' ಕೃತಿಯನ್ನು ಪತ್ರಿಕೋದ್ಯಮಿ ರಾಜಶೇಖರ್ ಕೋಟಿ ಬಿಡುಗಡೆಗೊಳಿಸಿದರು. ಕುವೆಂಪು ಅವರ `ಓ ನನ್ನ ಚೇತನ' ಹಾಡನ್ನು ವಿ.ಕೆ. ರಂಗಸ್ವಾಮಿ ಹಾಡಿದರು. ದೇಸಿರಂಗ ಸಂಸ್ಥೆಯ ಮುಖ್ಯಸ್ಥ ಜನಮನ ಕೃಷ್ಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ `ಜಾತಿ ವಿನಾಶದ ಹಾದಿಯಲ್ಲಿ ಯುವ ಜನಾಂಗದ ಪಾತ್ರ' ಕುರಿತು ಸಂವಾದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.