ADVERTISEMENT

ಬಜೆಟ್ ನಂತರ ಸರ್ಕಾರ ಪತನ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 10:45 IST
Last Updated 6 ಫೆಬ್ರುವರಿ 2011, 10:45 IST

ಹುಣಸೂರು: ‘ಚುನಾವಣೆ ಬಳಿಕ ಆತ್ಮಾವಲೋಕನ ಮಾಡಿಕೊಳ್ಳುವ ಬದಲಿಗೆ ಚುನಾವಣೆಗೆ ಮುಂಚಿತವಾಗಿ ಪ್ರಜ್ಞಾವಂತ ಮತದಾರನನ್ನು ಸೃಷ್ಟಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಬೇಕು’ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.ಪಟ್ಟಣದಲ್ಲಿ ಸ್ಥಳೀಯ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಅಭಿನಂದನೆ ಮತ್ತು ಸೋಲಿನ ಆತ್ಮಾವಲೋಕನ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು. ‘ರಾಜ್ಯದಲ್ಲಿ ವಾಮ ಮಾರ್ಗದ ಚುನಾವಣೆಗಳು ಮತದಾರನ ದಿಕ್ಕು ತಪ್ಪಿಸು ತ್ತಿದ್ದು, ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗೂ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದರು.

‘ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ಬಡವರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಬಿಜೆಪಿ ಸರ್ಕಾರ ಬಡವನ ಧ್ವನಿಗೆ ಕೈ ಜೋಡಿಸುತ್ತಿಲ್ಲ. ಅಧಿಕಾರದಲ್ಲಿರುವ ನಾಯಕರು ಅವರ ಆಸ್ತಿ ಉಳಿಸಿಕೊಳ್ಳುವಲ್ಲಿ ಮಗ್ನರಾಗಿ ಧ್ವನಿ ಇಲ್ಲದವರನ್ನು ಕೈ ಬಿಟ್ಟಿದ್ದಾರೆ’ ಎಂದರು.

ಆಯ ವ್ಯಯ: ಕೇಂದ್ರ ಸರ್ಕಾರ ಆಯವ್ಯಯ ಮಂಡಿಸಿದ ನಂತರ ರಾಜ್ಯ ಸರ್ಕಾರಗಳು ಆಯವ್ಯಯ ಮಂಡಿಸುವುದು ವಾಡಿಕೆ. ಆದರೆ, ಯಡಿಯೂರಪ್ಪನವರು ಮೊದಲ ಬಾರಿಗೆ ಕೇಂದ್ರಕ್ಕೂ ಮುನ್ನ ಬಜೆಟ್ ಮಂಡಿಸುವ ಆತುರದಲ್ಲಿದ್ದಾರೆ. ಯಾವ ಇಲಾಖೆಗೆ ಯಾವ ಯೋಜನೆಗೆ ಎಷ್ಟು ಹಣ ಮೀಸಲಿಡಲಿದ್ದಾರೆ ಎನ್ನುವ ಕುತೂಹಲ ನಮಗೂ ಇದೆ’ ಎಂದರು.
‘ಯಡಿಯೂರಪ್ಪನವರು ಮಂಡಿ ಸುವ ಬಜೆಟ್ ಜನಪರವಾಗಿ ಇರು ತ್ತದೆ ಎಂಬ ವಿಚಾರ ವಿರೋಧ ಪಕ್ಷದವರಿಗೆ ಖಾತ್ರಿಯಾಗಿದೆ. ಕಾರಣ ಬಜೆಟ್ ಮಂಡನೆ ನಂತರದಲ್ಲಿ ಸರ್ಕಾರ ವಿಸರ್ಜನೆಯಾಗುವ ಸಾಧ್ಯತೆ ಬಹುತೇಕ ಖಚಿತಗೊಂಡಿದೆ’ ಎಂದರು.

ತಂಬಾಕು: ರಾಜ್ಯದಲ್ಲಿ ಈ ಬಾರಿ ಬೆಳೆದ ತಂಬಾಕು ಸಂಪೂರ್ಣ ಖರೀದಿಯಾಗಲಿದ್ದು ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದರು. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಫೆ. 8ರಂದು ಬೆಂಗಳೂರಿನಲ್ಲಿ ತಂಬಾಕು ಮಂಡಳಿ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಅಧಿಕೃತ ಮತ್ತು ಅನಧಿಕೃತ ತಂಬಾಕು ಬೆಳೆಗಾರರ ಸೊಪ್ಪು ಮಾರಾಟ ಮಾಡಿಸುವ ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ‘ಕಾಂಗ್ರೆಸ್ ಸೋಲಿಗೆ ಒಗ್ಗಟಿನ ಹೋರಾಟದ ಕೊರತೆಯೇ ಕಾರಣ. ಪಕ್ಷ ನಮ್ಮದು ಎಂಬ ಭಾವನೆ ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ಬರ ಬೇಕು. ಕ್ಷಣಿಕೆ ಆಸೆಗೆ ಬಲಿಯಾಗಿ ಪಕ್ಷ ಸಿದ್ಧಾಂತವನ್ನು ಗಾಳಿ ತೂರುವ ಕಾರ್ಯಕರ್ತರು ಪಕ್ಷದ ಹಿತ ಕಾಪಾ ಡಲು ಹೇಗೆ ಸಾಧ್ಯ? ಎಂದರು.‘ಆತ್ಮಾವಲೋಕನ ಮಾಡಿಕೊಳ್ಳುವ ಬದಲಿಗೆ ನಮ್ಮ ತನ ಉಳಿಸಿಕೊಳ್ಳಬೇಕಾಗಿದೆ. ಕ್ಷೇತ್ರದಲ್ಲಿ ಪ್ರಾಮಾಣಿಕ ಶಾಸಕನಿದ್ದರೂ ಕಾರ್ಯಕರ್ತರು ಪಕ್ಷ ಕಟ್ಟುವಲ್ಲಿ ಹಿಂದೆ ಬೀಳುತ್ತಿರುವುದು ವಿಷಾದನೀಯ’ ಎಂದರು. ಮಾಜಿ ಶಾಸಕ ವಿ. ಪಾಪಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಸೇನಾ ಮಾತನಾಡಿದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.