ADVERTISEMENT

ಬನ್ನಿಮಂಟಪ: ಆಗಸ ನೋಡಲು ಅತ್ಯುತ್ಸಾಹ!

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2016, 5:10 IST
Last Updated 8 ಅಕ್ಟೋಬರ್ 2016, 5:10 IST

ಮೈಸೂರು:  ಬಾನಂಗಳದತ್ತ ಚಿಮ್ಮುವ ವಿಮಾನದ ಮಾದರಿ; ದಿಗಂತದಲ್ಲೇ ದಿಢೀರ್‌ ಪಲ್ಟಿ ಹೊಡೆದು ಅದೇ ವೇಗದಲ್ಲಿ ಮುನ್ನುಗ್ಗುವ ಮಲ್ಟಿಕಾಪ್ಟರ್‌,  ಹಾರುತ್ತಾ  ಹಕ್ಕಿಗಳಿಗೂ ಸವಾಲಾದ ಲೋಹದ ಹಕ್ಕಿ ರಾಫ್ಟರ್‌ 700ಎ, ಏಕಕಾಲಕ್ಕೆ ವಿಡಿಯೊ ಮತ್ತು ಫೋಟೊ ಚಿತ್ರಿಸುವ ಸಾಮರ್ಥ್ಯದ ಬಹುಮುಖಿ ಆಕ್ಟಾ–ಕಾಫ್ಟರ್‌...

ಇವು ಎತ್ತರೆತ್ತರ ಹಾರುತ್ತಲೇ ನೂರಾರು ಕಣ್ಣುಗಳನ್ನು ತನ್ನೆಡೆಗೆ ಸೆಳೆದುಕೊಂಡ ಮೈಸೂರು ದಸರಾ ಏರ್ ಷೋ ದೃಶ್ಯ. ಅಲ್ಲಿ ಆಕಾಶ ನೋಡಲು ಅತ್ಯುತ್ಸಾಹವಿತ್ತು! ಬನ್ನಿಮಂಟಪದಲ್ಲಿ ನಡೆದ, ಬಾನಂಗಳದಲ್ಲಿ ಸಾಧನಾ ಸಮಾವೇಶದಲ್ಲಿ ಲೋಹದ ಹಕ್ಕಿಗಳ ಮಾದರಿಗಳ ಕಸರತ್ತಿಗೆ ವೇದಿಕೆಯಾ ದುದು ‘ಮೈಸೂರು ದಸರಾ ಏರ್‌ ಷೋ’

ಬೆಂಗಳೂರಿನ 11 ವರ್ಷದ  ಆದಿತ್ಯ ಷೋದಲ್ಲಿ ಪಾಲ್ಗೊಂಡಿದ್ದ ಅತಿ ಕಿರಿಯ. ಈತ ರಾಫ್ಟರ್‌ 700ಎ ಮತ್ತು ಫ್ಲೆಜಾರ್ಟ್‌ ವಿಮಾನ ಮಾದರಿಯನ್ನು ರಿಮೋಟ್‌ ನಿಂದ ಚಾಲನೆ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಯಿತು.

ರಾಫ್ಟರ್‌ 700ಎ  ಹೆಲಿಕಾಫ್ಟರ್‌ ಮಾದರಿ, ನಿಧಾನಗತಿಯಲ್ಲಿ ಮೇಲೆ ಏರಿಸುವಾಗ ವಿವರಣೆಕಾರ ಬಾಲಕನ ಹೆಸರು ಉಲ್ಲೇಖಿಸಿದರು. ಸಭಿಕರು ‘ಆದಿತ್ಯ ಜೈ , ಜೈ’ ಎಂದು ಕೋರಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಫ್ಲೆಜಾರ್ಟ್‌ ವಿಮಾನ ಮಾದರಿ ಗಗನಕ್ಕೆ ಚಿಮ್ಮಿಸಿದಾಗ ಯಾವುದೇ ಶಬ್ದ ಕೇಳಿಸಲಿಲ್ಲ. ಇದು ಶಬ್ದರಹಿತವಾಗಿದ್ದು, ಹಕ್ಕಿಯಂತೆ ಕಾಣುತ್ತಿತ್ತು. ಆಗ ಆಗಸದಲ್ಲಿ ಹತ್ತಾರು ಹದ್ದುಗಳು ಇದ್ದವು. ಶಬ್ದ ಹೊಮ್ಮಿಸದ ಈ ‘ಹದ್ದು’ ಯಾವುದು ಎಂಬ ಪ್ರಶ್ನೆಯೂ ಪ್ರೇಕ್ಷಕರನ್ನು ಕಾಡಿತು.

ಇನ್ನೊಂದೆಡೆ ವೇಗವಾಗಿ ಮುಂದೆ ಸಾಗಿದ ಫ್ಲೆಜಾರ್ಟ್‌ ಅಷ್ಟೇ ವೇಗದಲ್ಲಿ ಭೂಮಿಗೆ ಲಂಬಾಕಾರವಾಗಿ ಮೇಲಕ್ಕೆ ಏರಿದಾಗ ಎಲ್ಲರೂ ‘ಓ... ಹೋ’ ಎಂದು ಹರ್ಷೋದ್ಗಾರ ವ್ಯಕ್ತಪಡಿಸಿದರು.

ನೆಹರೂಜಿ ಅವರು ‘ಆಕ್ಟಾ–ಕಾಫ್ಟರ್‌’ ಅನ್ನು ರಿಮೋಟ್‌ ನೆರವಿನಿಂದ ಚಿಮ್ಮಿಸಿದಾಗಲೂ ಸಭಿಕರಿಗೆ ಇಂಥದೇ ಪ್ರಶ್ನೆ ಕಾಡಿತು. ವೀಕ್ಷಕ ವಿವರಣೆ ‘ಇದು ಛಾಯಾಚಿತ್ರ ಮತ್ತು ವಿಡಿಯೊ ತೆಗೆಯಬಲ್ಲ ಕಾಫ್ಟರ್‌, ಅಷ್ಟ ದಿಕ್ಕುಗಳಲ್ಲಿ ಏನಿದೆ? ಏನು ನಡೆಯುತ್ತಿದೆ ಎಂಬು ದನ್ನು ಸ್ಪಷ್ಟವಾಗಿ ಚಿತ್ರಿಸಬಲ್ಲ ಸಾಮರ್ಥ್ಯ ಇದ್ಕಕ್ಕಿದೆ’ ಎಂದು ವಿವರಿಸಿದರು.

ಮೈಸೂರಿನಲ್ಲಿ ಅರಮನೆ, ವೃತ್ತಗಳು, ರಸ್ತೆಗಳ ದೀಪಾಲಂಕಾರ, ಪಕ್ಷಿನೋಟದ ಚಿತ್ರ, ವಿಡಿಯೊ ಕೂಡಾ ಇದನ್ನು ಬಳಸಿಯೇ ಚಿತ್ರಿಸಲಾಗಿದೆ ಎಂದರು.
ಮೊಬೈಲ್‌ ಸಂಖ್ಯೆ ಒದಗಿಸಿದರೆ ಸಭಿಕರನ್ನು ಚಿತ್ರಿಸಿ ವಾಟ್ಸ್‌ ಆ್ಯಪ್‌ ಮೂಲಕ ಒದಗಿಸುವ ಭರವಸೆಯನ್ನೂ ಕಾರ್ಯಕ್ರಮದಲ್ಲಿ ನೀಡಲಾಯಿತು.

ಮೈಸೂರು ಫ್ಲೈಯಿಂಗ್‌ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ ಹಾರಿಸಿದ ‘ಸ್ಕ್ಯಾನರ್‌’  ವಿಮಾನ ಮಾದರಿ ಮೈದಾನದ ಸುತ್ತೆಲ್ಲಾ ವಿಹಾರ ಮಾಡಿ, ಏಕಾಏಕಿ ಪಲ್ಟಿ ಹೊಡೆದು ಅದೇ ವೇಗದಲ್ಲಿ ಮೇಲಕ್ಕೆ ಚಿಮ್ಮಿತು. ಇದು ಗಂಟೆಗೆ 100 ಕಿ.ಮೀ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಲಾಯಿತು.

7ನೇ ತರಗತಿ ವಿದ್ಯಾರ್ಥಿ, ಎ.ಆರ್‌.ಚಿರಂತ್‌ ಬಾಳಪ್ಪ ‘ಇಮ್ಯಾಜಿನ್‌–50’ ಮತ್ತು ‘ಸ್ಕೈ ಸರಫೇಸ್‌’ ಮಾದರಿ ಹಾರಾಡಿಸಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ಸ್ಕೈ ಸರಫೇಸ್‌ ಬ್ಯಾಟರಿ ಒಮ್ಮೆ ಪೂರ್ಣ ಚಾರ್ಜ್‌ ಆದರೆ 25 ನಿಮಿಷ ಹಾರಾಡಬಲ್ಲದು. ‘ಇಮ್ಯಾಜಿನ್‌–50’ಗೆ ಅರ್ಧ ಲೀಟರ್ ಪೆಟ್ರೋಲ್‌ ಹಾಕಿದರೆ 40 ನಿಮಿಷ ಹಾರಾಡಬಲ್ಲದು ಎಂದು ವಿವರಿಸಿದರು.

ಅಲೆಕ್ಸ್‌ ಮತ್ತು ಭರತ್‌, ಚಿಂಟು ಹೀಗೆ... ಬೆಂಗಳೂರು, ಚೆನ್ನೈ ಹಾಗೂ ಇತರೆಡೆಗಳಿಂದ ಬಂದಿದ್ದ ವೃತ್ತಿಪರರು ತಮ್ಮ ಮಾದರಿಗಳನ್ನು ಪ್ರದರ್ಶಿಸಿ ಭೇಷ್‌ ಎನಿಸಿಕೊಂಡರು.

ಸಂಪೂರ್ಣ ರೇಡಿಯೊ ನಿಯಂತ್ರಿತ ವಿಮಾನ ಮಾದರಿ ಪ್ರದರ್ಶನ ಇದಾಗಿತ್ತು. ಮೈಸೂರು ದಸರಾ ಸಮಿತಿ ಮತ್ತು ಮೈಸೂರು ಫ್ಲೈಯಿಂಗ್‌ ಅಸೋಸಿಯೇಶನ್ ಸಹಯೋಗದಲ್ಲಿ  ಪ್ರದರ್ಶನ ನಡೆಯಿತು.

ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಅಸೋಸಿಯೇಷನ್ ಉಪಾ ಧ್ಯಕ್ಷ ಅಲೆಕ್ಸ್‌ ಪ್ರವೀಣ್, ಕಾರ್ಯದರ್ಶಿ ಡಾ.ಜೆರ್ರಿ ಅರುಣ್, ಜಂಟಿ ಕಾರ್ಯದರ್ಶಿ ಅರುಣಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.