ADVERTISEMENT

ಬಲಾಢ್ಯರಿಗೆ ಸವಾಲೆಸೆಯುವ ಸಣ್ಣ ಪಕ್ಷಗಳು

ಮೈಸೂರಿನ 11 ಕ್ಷೇತ್ರಗಳಲ್ಲಿ 20ಕ್ಕೂ ಅಧಿಕ ಪಕ್ಷಗಳು ಕಣಕ್ಕೆ

ಮಹಮ್ಮದ್ ನೂಮಾನ್
Published 29 ಏಪ್ರಿಲ್ 2018, 13:28 IST
Last Updated 29 ಏಪ್ರಿಲ್ 2018, 13:28 IST

ಮೈಸೂರು: ರಿಪಬ್ಲಿಕನ್‌ ಸೇನಾ, ಸ್ವರಾಜ್‌ ಇಂಡಿಯಾ, ರಾಣಿ ಚನ್ನಮ್ಮ ಪಾರ್ಟಿ, ಡಾ.ಅಂಬೇಡ್ಕರ್‌ ಸಮಾಜವಾದಿ ಡೆಮಾಕ್ರಟಿಕ್‌ ಪಾರ್ಟಿ, ಭಾರತೀಯ ಜನಶಕ್ತಿ ಕಾಂಗ್ರೆಸ್‌...

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕೆಲವು ಸಣ್ಣ ಪಕ್ಷಗಳು ಇವು. ಪ್ರತಿ ಚುನಾವಣೆಯಲ್ಲೂ ಸಣ್ಣ ಪಕ್ಷಗಳ ಭರಾಟೆ ಇದ್ದೇ ಇರುತ್ತದೆ. ಈ ಬಾರಿಯ ಚುನಾವಣೆಯೂ ಇದರಿಂದ ಹೊರತಾಗಿಲ್ಲ.

ಮೈಸೂರು ಜಿಲ್ಲೆಯ ಎಲ್ಲ 11 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‌ ನಡುವೆ ಪೈಪೋಟಿ ನಡೆಯುವುದು ಸಾಮಾನ್ಯ. ಈ ಮೂರು ಪಕ್ಷಗಳ ಜಿದ್ದಾಜಿದ್ದಿನ ನಡುವೆ ತಮ್ಮ ಅಸ್ತಿತ್ವ ತೋರಿಸಿ
ಕೊಳ್ಳಲು ಕೆಲವು ಸಣ್ಣ ಪಕ್ಷಗಳು ಪ್ರಯತ್ನಿಸುತ್ತಿವೆ.

ADVERTISEMENT

ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ಅತಿ ಹೆಚ್ಚು ಸಣ್ಣ ಪಕ್ಷಗಳು ಕಣದಲ್ಲಿವೆ. ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ಇಲ್ಲಿ ಸುಮಾರು 10 ಪಕ್ಷಗಳ ಅಭ್ಯರ್ಥಿಗಳು ಅಗ್ನಿಪರೀಕ್ಷೆಗೆ ಇಳಿದಿದ್ದಾರೆ.

ಕೆಲವು ಸಣ್ಣ ಪಕ್ಷಗಳು ಎರಡು ಮೂರು ಕ್ಷೇತ್ರಗಳಿಗೆ ಮಾತ್ರ ತಮ್ಮ ಹೋರಾಟವನ್ನು ಸೀಮಿತಗೊಳಿಸಿವೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಆಲ್‌ ಇಂಡಿಯಾ ಮಹಿಳಾ ಎಂಪಾವರ್‌ಮೆಂಟ್‌ ಪಾರ್ಟಿ (ಎಐಎಂಇಪಿ) ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯ ತೋರಿಸಿದೆ.

ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಈ ಬಾರಿ ನರಸಿಂಹರಾಜ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಜನತಾದಳ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜಿಲ್ಲೆಯಲ್ಲಿ ಎಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಕಣದಲ್ಲಿರುವ ಸಣ್ಣ ಪಕ್ಷಗಳು

ಎಐಎಂಇಪಿ, ಎಸ್‌ಡಿಪಿಐ, ರಿಪಬ್ಲಿಕನ್‌ ಸೇನಾ, ಜನಸಾಮಾನ್ಯರ ಪಾರ್ಟಿ, ಸ್ವರಾಜ್‌ ಇಂಡಿಯಾ, ರಾಣಿ ಚನ್ನಮ್ಮ ಪಾರ್ಟಿ, ಭಾರತೀಯ ರಿಪಬ್ಲಿಕನ್‌ ಪಕ್ಷ, ಸಾಮಾನ್ಯ ಜನತಾ ಪಾರ್ಟಿ, ಡಾ.ಅಂಬೇಡ್ಕರ್‌ ಸಮಾಜವಾದಿ ಡೆಮಾಕ್ರಟಿಕ್‌ ಪಾರ್ಟಿ, ಅಂಬೇಡ್ಕರೈಟ್‌ ಪಾರ್ಟಿ ಆಫ್‌ ಇಂಡಿಯಾ, ಭಾರತೀಯ ಜನಶಕ್ತಿ ಕಾಂಗ್ರೆಸ್‌, ನಮ್ಮ ಕಾಂಗ್ರೆಸ್‌, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ, ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಾರ್ಟಿ, ಅಂಬೇಡ್ಕರ್‌ ನ್ಯಾಷನಲ್‌ ಕಾಂಗ್ರೆಸ್‌, ಕರ್ನಾಟಕ ಜನತಾ ಪಕ್ಷ, ಭಾರತೀಯ ಡಾ.ಬಿ.ಆರ್‌.ಅಂಬೇಡ್ಕರ್‌ ಜನತಾ ಪಾರ್ಟಿ, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್.

ವರುಣಾದಲ್ಲಿ ಹೆಚ್ಚು ಪಕ್ಷೇತರರು

ಸಣ್ಣ ಪಕ್ಷಗಳ ಜತೆಗೆ ಪಕ್ಷೇತರರೂ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 11 ಪಕ್ಷೇತರರು ಕಣದಲ್ಲಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕೃಷ್ಣರಾಜದಲ್ಲಿ 10 ಮತ್ತು ಚಾಮುಂಡೇಶ್ವರಿಯಲ್ಲಿ 9 ಪಕ್ಷೇತರರು ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.