ADVERTISEMENT

ಬಳಕೆಯಾಗದ ಉದ್ಯೋಗ ಖಾತರಿ ಅನುದಾನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 6:35 IST
Last Updated 5 ಜನವರಿ 2012, 6:35 IST

ತಿ.ನರಸೀಪುರ: ಗ್ರಾಮ ಪಂಚಾಯಿತಿ ಗಳಿಗೆ ಉದ್ಯೋಗ ಖಾತರಿ ಯೋಜನೆ ಯಡಿ ನೀಡುವ ಅನುದಾನ ಸಮರ್ಪಕ ವಾಗಿ ಬಳಕೆಯಾಗುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ 23 ಹಾಗೂ ಲಿಂಕ್ ರಸ್ತೆಯ 111 ವಾಣಿಜ್ಯ ಮಳಿಗೆಗಳ ಉದ್ಘಾಟನೆ ಮತ್ತು ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರದಿಂದ 6 ಲಕ್ಷ ಅನುದಾನ ಮಾತ್ರ ಬರುತ್ತದೆ. ಆದರೆ ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಿಂದ 5 ರಿಂದ 6 ಕೋಟಿ ಅನುದಾನ ಪಡೆಯಬಹುದು. ಇದರಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಗ್ರಾಮಗಳ ಅಭಿವೃದ್ಧಿ ಮಾಡಬಹುದು. ಆದರೆ ಆ ಕೆಲಸ ಆಗುತ್ತಿಲ್ಲ. ರಾಜ್ಯಕ್ಕೆ 4800 ಕೋಟಿ ರೂಪಾಯಿ ಬರಬೇಕಿತ್ತು. ಆದರೆ ರೂ.2300 ಕೋಟಿ ಬಂದಿದೆ. ಅದು ಸಮರ್ಪಕ ವಾಗಿ ಬಳಕೆಯಾಗುತ್ತಿಲ್ಲ ಎಂದರು.

ಶಾಸಕ ಡಾ. ಎಚ್.ಸಿ. ಮಹಾದೇವಪ್ಪ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ನಡೆಯುತ್ತಿವೆ. ಸ್ಥಳೀಯ ಸಂಪನ್ಮೂಲ ಕ್ರೋಢೀಕರಿಸಿ 134 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. 10 ಕೋಟಿ ವೆಚ್ಚದಲ್ಲಿ ಪಟ್ಟಣ ಮತ್ತು ಬೈರಾಪುರ ಪಂಚಾಯಿತಿಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಒಳ ಚರಂಡಿ ಕಾಮಗಾರಿ ಮುಗಿದ ನಂತರ ಲಿಂಕ್ ರಸ್ತೆ ಮತ್ತು ನಂಜನಗೂಡು ರಸ್ತೆಯ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಸಂಸದರ ನಿಧಿಯಿಂದ ಕನಕ ಭವನಕ್ಕೆ 20 ಲಕ್ಷ, ಅಂಬೇಡ್ಕರ್ ಭವನ ನವೀಕರಣಕ್ಕೆ ಅನುದಾನ ನೀಡಲಾಗಿದೆ. ಮೈಸೂರು- ತಿ. ನರಸೀಪುರ ಮಾರ್ಗ ರಸ್ತೆ ಅಭಿವೃದ್ಧಿಗೆ 434 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ ಎಂದು ತಿಳಿಸಿದರು.

ಶೇ 22.75ರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ಸಿದ್ದರಾಮಯ್ಯ ವಿತರಿಸಿದರು.
ಪ.ಪಂ. ಅಧ್ಯಕ್ಷ ಬಸವಣ್ಣ, ಜಿ.ಪಂ ಸದಸ್ಯ ಕೆ. ಮಹಾದೇವ್, ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ, ಪಪಂ ಉಪಾಧ್ಯಕ್ಷ ಮಲ್ಲಿಕಾರ್ಜುನ, ಮುಖ್ಯಾ ಧಿಕಾರಿ ಕರಿಬಸವಯ್ಯ, ಎಂಜಿನಿಯರ್ ಪುರುಷೋತ್ತಮ್, ಸದಸ್ಯರಾದ ರೇಣುಕಾರಾಮು, ಯಶೋಧ, ಪುಟ್ಟೀರಮ್ಮ ಮಹಾದೇವ್, ನಂಜುಂಡ ಸ್ವಾಮಿ, ಟೆಂಪೋ ಮಹಾದೇವಣ್ಣ, ಮಲ್ಲೇಶ್, ನಾಮಕರಣ ಸದಸ್ಯರಾದ ಸಿದ್ದಲಿಂಗಮೂರ್ತಿ, ಶಿವರಾಜು, ಚಾಮಮ್ಮ, ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಕರುಹಟ್ಟಿ ಮಹಾದೇವಯ್ಯ, ಪಿ. ಸ್ವಾಮಿನಾಥ್ ಗೌಡ, ಬೈರಾಪುರ ಗ್ರಾ.ಪಂ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ. ಪಪಂ ಮಾಜಿ ಅಧ್ಯಕ್ಷ ಮಹಾದೇವಸ್ವಾಮಿ, ಸದಸ್ಯ ದಿವಾಕರ್, ಕುರುಬರ ಸಂಘದ ಕಾರ್ಯದರ್ಶಿ ಬಸವರಾಜು, ಬಿ. ಮಹಾದೇವ್, ಹುಣಸೂರು ಬಸವಣ್ಣ, ವರುಣ ಅಧ್ಯಕ್ಷ ಮುದ್ದೇಗೌಡ  ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.