ADVERTISEMENT

ಬಳ್ಳೂರು ಗ್ರಾಮದಲ್ಲಿ ಹತ್ತಾರು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 5:45 IST
Last Updated 25 ಜನವರಿ 2012, 5:45 IST

ಸಾಲಿಗ್ರಾಮ: ಕಾವೇರಿ ನದಿಯ ದಂಡೆ ಮೇಲೆ ವಾಸ ಮಾಡುತ್ತಿರುವ ಇಲ್ಲಿಯ ಜನರು ಕುಡಿಯವ ನೀರಿಗೆ ಕೊಳವೆ ಬಾವಿ ಆಶ್ರಯಿಸಿದ್ದಾರೆ. ಚರಂಡಿಗಳನ್ನು ಸ್ವಚ್ಛ ಮಾಡಿ ಹಲವು ವರ್ಷಗಳು ಕಳೆದಿದ್ದು, ದುರ್ವಾಸನೆ ಬರುತ್ತಿದೆ. ರೋಗ ಹರಡುವ ಭೀತಿಯಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. 

 -ಇದು ಸಾಲಿಗ್ರಾಮ ಹೋಬಳಿಯ ಬಳ್ಳೂರು ಗ್ರಾಮದ ಪರಿಶಿಷ್ಟ ಸಮುದಾಯದ ಜನರು ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಿರುವ ನರಕಯಾತನೆ.

ಈ ಸಮುದಾಯ ವಾಸ ಮಾಡುವ ಬಡಾವಣೆಯಲ್ಲಿ ಸರಿಯಾದ ರಸ್ತೆಗಳು ಇಲ್ಲ. ಇರುವ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳು ಎದ್ದು ಬಂದಿವೆ. ಜನ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬಳ್ಳೂರು ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಸದಸ್ಯರು ದೂರುತ್ತಾರೆ.

ಈ ಸಮುದಾಯ ವಾಸ ಮಾಡುವ ಬಡಾವಣೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಚರಂಡಿ ನಿರ್ಮಿಸಿರುವ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಂಡಿಲ್ಲ.ಇಲ್ಲಿಯ ಜನರು ರೋಗಗಳಿಗೆ ತುತ್ತಾಗಿ ಪರಿತಪ್ಪಿಸುತ್ತಿದ್ದಾರೆ ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

`ಕುಡಿಯುವ ನೀರು ವಾರಕ್ಕೆ ಒಮ್ಮೆ ಮಾತ್ರ ಸಿಗುತ್ತಿದೆ. ಉಳಿದ ದಿನ ಮಹಿಳೆಯರು ಕಾವೇರಿ ನದಿಯತ್ತ ಹೆಜ್ಜೆ ಹಾಕುತ್ತಾರೆ. ಸ್ಥಳೀಯ ಪಂಚಾಯಿತಿ ನೀರು ಸರಬರಾಜು ಮಾಡಲು ಮುಂದಾಗಿಲ್ಲ~ ಎಂದು ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಅಣ್ಣಯ್ಯ ಆರೋಪಿಸುತ್ತಾರೆ.

ಐದು ವರ್ಷಗಳ ಹಿಂದೆ ಇಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಅಂದಿನ ಶಾಸಕ ಮಂಚನಹಳ್ಳಿ ಮಹದೇವ್ ಹಣ ಬಿಡುಗಡೆ ಮಾಡಿದ್ದರು. ಈ ವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ಹಣವಿಲ್ಲ ಎಂಬ ಉತ್ತರ ನೀಡುತ್ತಾರೆ. ಅರ್ಧಕ್ಕೆ ನಿಂತಿರುವ ಸಮುದಾಯ ಭವನ ಬಿಸಿಲು ಮಳೆಗೆ ಸಿಕ್ಕಿ ಬೀಳುವ ಸ್ಥಿತಿಗೆ ಬಂದಿದೆ.

ಇಲ್ಲಿ ವಾಸ ಮಾಡುವ ಜನರ ಬಹುತೇಕ ಮನೆಗಳು ಶಿಥಿಲ ಸ್ಥಿತಿಯಲ್ಲಿವೆ. ಜನತೆ ಆತಂಕದಲ್ಲಿ ಮುಂದೇನು ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ತಿರುಗಿ ನೋಡುವರೆ ಎಂದು ಜನತೆ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.