ADVERTISEMENT

ಬಹುರೂಪಿಯಲ್ಲಿ ಅಗ್ನಿ ಮತ್ತು ಮಳೆ..!

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 9:35 IST
Last Updated 17 ಜನವರಿ 2012, 9:35 IST

ಮೈಸೂರು: ಕಲಾಮಂದಿರ ಆವರಣದ ರಂಗಾಯಣ ದತ್ತ ಹೆಜ್ಜೆ ಹಾಕುತ್ತಿದ್ದ ರಂಗಾಸಕ್ತರಲ್ಲಿ ಚಳಿ ನಡುಕ ಹುಟ್ಟಿಸಿದರೆ, ಅದಾಗಲೇ ನಾಟಕ ನೋಡಲು ಆಸೀನರಾದವರಿಗೆ ಅಗ್ನಿ ಮತ್ತು ಮಳೆಯ ಸ್ಪರ್ಶ..!

ಹೌದು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸ ವದ ಮೂರನೇ ದಿನವಾದ ಸೋಮವಾರವೂ ರಂಗಾಯಣ ಆವರಣ ಭರ್ತಿ ಆಗಿತ್ತು. ಸಂಜೆಯಾ ಗುತ್ತಿದ್ದಂತೆ ಕಾಲೇಜಿ ವಿದ್ಯಾರ್ಥಿಗಳು, ರಂಗಾ
ಸಕ್ತರು ಗುಂಪು ಗುಂಪಾಗಿ ರಂಗಾಯಣದತ್ತ ಹೆಜ್ಜೆ ಹಾಕುವ ಮೂಲಕ `ಬಹುರೂಪಿಗೆ ರಂಗು~ ತಂದರು.
ವನರಂಗದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ `ಅಗ್ನಿ ಮತ್ತು ಮಳೆ~ ನಾಟಕಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಟನ ಕಲಾವಿದರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ ಅನುಭವ ಕಟ್ಟಿಕೊಟ್ಟರು. ಹಿಂದಿನ ದಿನವೇ ಡಾ. ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ~ಕ್ಕೆ ತುಂಬಿ ತುಳುಕಿದ್ದ `ವನರಂಗ~ ಇಂದೂ ಕೂಡ ಭರ್ತಿಯಾಗಿತ್ತು.

ಸಂಜೆ 5 ಗಂಟೆಗೆ ಮೈಸೂರಿನ ರಂಗ ಸಂಗಮ ತಂಡದ ಕಲಾವಿದರು `ಸಂಸ್ಕಾರ~ ಬೀದಿ ನಾಟಕ ಪ್ರಸ್ತುತ ಪಡಿಸಿ, ನೆರೆದ ಪ್ರೇಕ್ಷಕರನ್ನು ಸ್ವಾಗತಿಸಿದರು. ಬಳಿಕ ರಂಗಾಯಣದ ಭಾರತೀಯ ರಂಗ ಶಿಕ್ಷಣ ವಿದ್ಯಾರ್ಥಿಗಳು ಕೋಲಾಟ ನೃತ್ಯಕ್ಕೆ ಹೆಜ್ಜೆ ಹಾಕಿದರು.

ಶ್ರೀರಂಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್‌ರ `ನಾಗಮಂಡಲ~ ಚಲನಚಿತ್ರದ ಪ್ರದರ್ಶನ ನಡೆಯಿತು. ಪ್ರಕಾಶ್ ರೈ ಹಾಗೂ ನಟಿ ವಿಜಯಲಕ್ಷ್ಮೀ ಅಭಿನಯದ ನಾಗಮಂಡಲ ವಿಶಿಷ್ಟ ಭಾಷೆ ಮೂಲಕ ನೋಡುಗರ ಗಮನ ಸೆಳೆಯಿತು.

ಕಲಾಮಂದಿರದಲ್ಲಿ ಗದಗಿನ ಪಂಡಿತ ಪುಟ್ಟರಾಜ ಗವಾಯಿ ನಾಟ್ಯಸಂಘದ ಕಲಾವಿದರು ಪ್ರಸ್ತುತ ಪಡಿಸಿದ `ಹೇಮರೆಡ್ಡಿ ಮಲ್ಲಮ್ಮ~ ನಾಟಕ ಅದ್ಭುತವಾಗಿತ್ತು. ಶ್ರೀಕಂಠಶಾಸ್ತ್ರಿ ನಲವಡಿ ನಿರ್ದೇಶನದ ಈ ನಾಟಕವನ್ನು ರೇವಣಸಿದ್ದಯ್ಯ ನಿರ್ದೇಶಿಸಿದ್ದಾರೆ. ಉತ್ತರ ಕನ್ನಡ ಭಾಷೆಯನ್ನು ಒಳಗೊಂಡ ನಾಟಕ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿತು.

ಭೂಮಿಗೀತದಲ್ಲಿ ಭುವನೇಶ್ವರದ ರಂಗಧಾರ ಅಕಾಡೆಮಿ ಮತ್ತು ರೆಪರ್ಟರಿ ಆಫ್ ಥಿಯೇಟರ್ ಆರ್ಟ್ಸ್‌ನ ಕಲಾವಿದರು ಪ್ರದರ್ಶಿಸಿದ ನಿಂಗುಲ್ (ಒರಿಯಾ) ನಾಟಕಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. `ಭಾಷೆ ಅರ್ಥವಾಗುವುದಿಲ್ಲ, ಆದರೆ ಭಾವಾಭಿನಯ ಮತ್ತು ಸಂಗೀತದ ಮೂಲಕ ಒಂದಿಷ್ಟು ಅರ್ಥಮಾಡಿಕೊಳ್ಳಬಹುದು~ ಎಂದು ಪ್ರೇಕ್ಷಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.