ADVERTISEMENT

ಬಿಜೆಪಿ ತೆಕ್ಕೆಗೆ ಮೈಸೂರು ತಾ.ಪಂ.

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:35 IST
Last Updated 12 ಡಿಸೆಂಬರ್ 2012, 10:35 IST

ಮೈಸೂರು: ಕಾಂಗ್ರೆಸ್ ಸದಸ್ಯರ ಬಹಿಷ್ಕಾರದ ನಡುವೆ ಮಂಗಳವಾರ ನಡೆದ ಮೈಸೂರು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಬಿಜೆಪಿಯ ವಿಜಯಲಕ್ಷ್ಮಿ ಅಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾದರು. ಇದೇ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಪಂಚಾಯಿತಿಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ತಲಾ ಇಬ್ಬರು ಹಾಗೂ ಬಿಜೆಪಿಯಿಂದ ಒಬ್ಬ ಅಭ್ಯರ್ಥಿ ಕಣಕ್ಕಿಳಿಯುವುದಾಗಿ ಪಕ್ಷಗಳು ಮುನ್ಸೂಚನೆ ನೀಡಿದ್ದರಿಂದ ಚುನಾವಣೆ ಕುತೂಹಲಕಾರಿಯಾಗಿತ್ತು. ಈ ನಡುವೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತು. 

ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 29 ಸಂಖ್ಯಾಬಲವಿದೆ. ಈ ಪೈಕಿ ಕಾಂಗ್ರೆಸ್‌ನ 12,ಜೆಡಿಎಸ್‌ನ 11, ಬಿಜೆಪಿಯ 6 ಮಂದಿ ಸದಸ್ಯರಿದ್ದಾರೆ. ಈಗಾಗಲೇ ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರ ಚುಕ್ಕಾಣಿ ಹಿಡಿದು, ಮೊದಲ ಅವಧಿಯಲ್ಲೇ ತಾಲ್ಲೂಕು ಪಂಚಾಯಿತಿಯಲ್ಲಿಯೂ ಮೈತ್ರಿ ಮುಂದುವರೆದಿತ್ತು. ಈ ನಡುವೆ ಒಪ್ಪಂದದಂತೆ ಅಧಿಕಾರ ಹಸ್ತಾಂತರಿಸಲು ಜೆಡಿಎಸ್ ಮೀನಮೇಷ ಎಣಿಸಿತು.

ತಾಲ್ಲೂಕು ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈಗಾಗಲೇ ಜೆಡಿಎಸ್‌ನ ಮಹಾದೇವ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಅಧ್ಯಕ್ಷ ಪಟ್ಟಕ್ಕೆ ತೀವ್ರ ಲಾಬಿ ನಡೆದಿತ್ತು. ಹಾಲಿ ಅಧ್ಯಕ್ಷರು ಅಧಿಕಾರದಲ್ಲೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಹರ ಸಾಹಸ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಿಗೆ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿತು.

ಮೈಸೂರು-ಹುಣಸೂರು ಮುಖ್ಯ ರಸ್ತೆಯ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಬಸವರಾಜು ನೇತೃತ್ವದಲ್ಲಿ ನಡೆದ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಬಿಜೆಪಿಯ ವಿಜಯ ಲಕ್ಷ್ಮಿ  ಹಾಗೂ ಜೆಡಿಎಸ್‌ನ ರಾಣಿ ಚಂದ್ರಶೇಖರ್ ನಾಮಪತ್ರ ಸಲ್ಲಿಸಿದರು. ಈ ನಡುವೆ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದ ರಾಣಿ ಚಂದ್ರಶೇಖರ ಅವರ ಮನವೊಲಿಸಿ ನಾಮಪತ್ರ ಹಿಂತೆಗೆಸಲು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಯಶಸ್ವಿಯಾದರು.

ಮಧ್ಯಾಹ್ನ 12.30ರ ವೇಳೆಗೆ ಬಿಜೆಪಿಯ ಸದಸ್ಯೆ ವಿಜಯಲಕ್ಷ್ಮಿ ಮೈಸೂರು ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿ ದರು. ಅತ್ತ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಸದಸ್ಯರು ವಿಜಯೋತ್ಸವ ಆಚರಿಸಿದರು.

ಇದಕ್ಕೂ ಮೊದಲು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ನ 12 ಮಂದಿ ಸದಸ್ಯರುಗಳು ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ವಿರೋಧ ಪಕ್ಷದಲ್ಲೇ ಪಕ್ಷ ಮುಂದುವರೆಯುವ ಕುರಿತು ಸದಸ್ಯರು ನಿಲುವು ತಳೆದರು ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.