ADVERTISEMENT

ಬೆಮಲ್ ಅಂಗಳದಲ್ಲಿ ಯಂತ್ರಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 10:15 IST
Last Updated 8 ಫೆಬ್ರುವರಿ 2011, 10:15 IST

ಮೈಸೂರು: ಸಾಲಾಗಿ ನಿಂತಿದ್ದ ಎಕ್ಸವೇಟರ್‌ಗಳು, ಡಂಪರ್‌ಗಳು, ವಾಟರ್ ಸ್ಪಿಂಕ್ಲರ್‌ಗಳು ಒಂದರ ಹಿಂದೆ   ಒಂದರಂತೆ ಬರುತ್ತಿದ್ದವು. ಅಲ್ಲಿ ಸೇರಿದ್ದ ನೂರಾರು ಕಾರ್ಮಿಕರು, ಅಧಿಕಾರಿಗಳು, ತಂತ್ರಜ್ಞರು ಚಪ್ಪಾಳೆ ಮೂಲಕ ಸ್ವಾಗತಿಸಿ, ಹರ್ಷವನ್ನು ವ್ಯಕ್ತಪಡಿಸಿದರು.

ಇಂತಹ ಅಪರೂಪದ ದೃಶ್ಯ ದೇಶದಲ್ಲಿಯೇ ಹೆಸರಾಗಿರುವ ಭಾರತ್ ಅರ್ಥ್ ಮೂವರ್ ಲಿಮಿಟೆಡ್ (ಬಿಇಎಂಎಲ್)ನ ಆವರಣದಲ್ಲಿ ಸೋಮವಾರ ಕಂಡುಬಂದಿತು.ರಕ್ಷಣಾ ಸಚಿವ ಎ.ಕೆ.ಆಂಟನಿ ಸಮ್ಮುಖದಲ್ಲಿ ಬಿಇಎಂಎಲ್‌ನ ಉತ್ಪಾದನೆಗಳಾದ ಅಪರೂಪದ ಎಕ್ಸವೇಟರ್‌ಗ ಳು, ಡಂಪರ್‌ಗಳು, ವಾಟರ್ ಸ್ಪಿಂಕ್ಲರ್‌ಗಳ ವಿವಿಧ  ವಿನ್ಯಾಸದ ಒಟ್ಟು 18 ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ರೋಮಾಂಚನಗೊಂಡರು.

ಆರಂಭದಲ್ಲಿ ಬೃಹತ್ ಎಕ್ಸವೇಟರ್ ಆಗಮಿಸಿ ರಕ್ಷಣಾ ಸಚಿವ ಆಂಟನಿ ಕುಳಿತಿದ್ದ ವೇದಿಕೆಯತ್ತ ಮುಖ ಮಾಡಿ ತನ್ನ ಬೊಗಸೆಯಲ್ಲಿ ಇಟ್ಟುಕೊಂಡಿದ್ದ ಗುಲಾಬಿ ಹೂವಿನ ಪಕಳೆ       ಗಳನ್ನು ಸುರಿಯುವ ಮೂಲಕ ಅರ್ಥಪೂರ್ಣವಾಗಿ ಸ್ವಾಗತಿಸಿತು. ಉತ್ತಮ ಸಾಮರ್ಥ್ಯ ಹೊಂದಿರುವ ಎಕ್ಸವೇಟರ್‌ಗಳನ್ನು ಹೆದ್ದಾರಿ ನಿರ್ಮಾಣ, ಗಣಿ ಮತ್ತು ಕಲ್ಲಿದ್ದಲು ಗಣಿಗಾರಿಕೆ ಹಾಗೂ ನೀರಾವರಿ ಯೋಜನೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದು 1 ಸಾವಿರ ಟನ್‌ಗಳಷ್ಟು ಭಾರವಿದೆ.

ಈ ಡಂಪರ್ 100 ಟನ್‌ಗಳಷ್ಟು ಮಣ್ಣು ಇತ್ಯಾದಿಗಳನ್ನು ಸುಲಭವಾಗಿ ಸಾಗಣೆ ಮಾಡಬಲ್ಲದು. ಇದು ಗಣಿ  ಮತ್ತು ಕಲ್ಲಿದ್ದಲು ಗಣಿಗಾರಿಕೆಗೆ ಹೆಚ್ಚು ಅನುಕೂಲವಾಗುತ್ತದೆ. ಆಳದಲ್ಲಿ ಗಣಿಗಾರಿಕೆ ಮಾಡುವುದರಿಂದ ಇದು ಹೆಚ್ಚು ಉಪಯೋಗಿಯಾಗಿದೆ.ಇಲ್ಲಿ ಪ್ರದರ್ಶನಗೊಂಡ ವಾಟರ್ ಸ್ಪಿಂಕ್ಲರ್ 70 ಸಾವಿರ ಲೀಟರ್ ನೀರನ್ನು ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಸಹ ಗಣಿಗಾರಿಕೆಗೆ ಹೆಚ್ಚು ಉಪಯೋಗಿ. ಗಣಿಗಾರಿ ಸಂದರ್ಭದಲ್ಲಿ ಹೆಚ್ಚು ದೂಳು ಮೇಲೇಳುತ್ತದೆ. ಇದರಿಂದ ಅಲ್ಲಿ ಕಾರ್ಮಿಕರು ಕೆಲಸ ಮಾಡುವುದು ಕಷ್ಟ ವಾಗುತ್ತದೆ. ಆದ್ದರಿಂದ  ಪ್ರತಿ ಎರಡು ಗಂಟೆಗೊಮ್ಮೆ ನೀರು  ಸಿಂಪಡಿಸಲಾಗುತ್ತದೆ.

ಇಷ್ಟೇ ಅಲ್ಲದೇ ದೇಶದ ಗಡಿ ಪ್ರದೇಶ ಮತ್ತಿತರ ಭಾಗದಲ್ಲಿ ಹಿಮಪಾತವಾದಾಗ ರಸ್ತೆಯನ್ನು ತೆರವುಗೊಳಿಸಲು ಅಗತ್ಯವಾದ ಯಂತ್ರವನ್ನು ಸಹ ಉತ್ಪಾದಿಸಲಾಗಿದೆ.
ವಾಟರ್ ಸ್ಪಿಂಕ್ಲರ್ ಯಂತ್ರದ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಒಮ್ಮೆಗೆ ನೀರು ಜೋರಾಗಿ ಕಾರಂಜಿಯಂತೆ ಚಿಮ್ಮತೊಡಗಿತು. ಅಲ್ಲಿ ನೆರೆದಿದ್ದ 50 ಕ್ಕೂ ಹೆಚ್ಚು ಕಾರ್ಮಿಕರು ನೀರಿನ ಸ್ನಾನ ಮಾಡಬೇಕಾಯಿತು.

ಬಿಇಎಂಎಲ್ ಚೇರ್ಮನ್ ಮತ್ತು ಪ್ರಧಾನ ನಿರ್ದೇಶಕ ಎ.    ಆರ್.ಎಸ್.ನಟರಾಜನ್, ಸಂಸದ ಎಚ್.ವಿಶ್ವನಾಥ್,   ಶಾಸಕ ಎಂ.ಸತ್ಯನಾರಾಯಣ, ಮೇಯರ್ ಸಂದೇಶ್             ಸ್ವಾಮಿ, ರಕ್ಷಣಾ ಕಾರ್ಯದರ್ಶಿ ಆರ್.ಕೆ.ಸಿಂಗ್  ಹಾಗೂ ಇತರರು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.