ADVERTISEMENT

ಭಾರತೀಯನ ಬದುಕೇ ಒಂದು ಸಂಗೀತ

ಸಂಸದ ಎಚ್.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 7:00 IST
Last Updated 7 ಡಿಸೆಂಬರ್ 2012, 7:00 IST

ಮೈಸೂರು: `ಭಾರತೀಯನ ಬದುಕೇ ಒಂದು ಸಂಗೀತ. ಆತ ಹುಟ್ಟಿನಿಂದ ಸಾಯುವವರೆಗೆ ನವರಸಗಳನ್ನು ಆಸ್ವಾದಿಸುತ್ತಾನೆ. ಬೇರಾವ ದೇಶದಲ್ಲೂ ಈ ವ್ಯವಸ್ಥೆ ಇಲ್ಲ' ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು.

ಸರಸ್ವತಿಪುರಂನ ಜೆಎಸ್‌ಎಸ್ ಕಾಲೇಜಿನಲ್ಲಿ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಗುರುವಾರ ಏರ್ಪಡಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣ 19ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

`ಮನುಷ್ಯ ಸಂಬಂಧಗಳಿಗೆ ಬೆಲೆ ಹೆಚ್ಚು. ಯದುವಂಶದ ಅರಸರು ಸಂಗೀತ, ಕಲೆ, ಸಾಹಿತ್ಯಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು. ಅದೇ ಮಾದರಿ ಯಲ್ಲಿ ಸುತ್ತೂರು ಶ್ರೀಗಳು ಸಂಗೀತ, ಸಾಹಿತ್ಯ, ಕಲೆಗಳಿಗೆ ಪ್ರೋತ್ಸಾಹ ನೀಡುತ್ತ ರಾಜಪರಂಪರೆ ಮುಂದು ವರಿಸಿಕೊಂಡು ಬಂದಿದ್ದಾರೆ.

ಸರಾ ಮಾತ್ರವಲ್ಲ, ವರ್ಷವಿಡೀ ಸಂಗೀತ ಕಾರ್ಯಕ್ರಮಗಳು ನಡೆಯಬೇಕು ಎಂಬುದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶಯವಾಗಿದೆ. ಮೈಸೂರು ಸಾಂಸ್ಕೃತಿಕ ನಗರ ಮಾತ್ರವಲ್ಲ; ಸಂಗೀತ ನಗರವೂ ಹೌದು. ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸು ತ್ತಿರುವುದು ಸಂತಸದ ವಿಷಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಶಿವರಾಮ ಕಾರಂತರ ಚೋಮನ ದುಡಿಯಲ್ಲಿ ಶೋಷಿತ ಸಮುದಾಯದ ಚೋಮ ತಾನು ಬೆಳೆದ ಧಾನ್ಯಗಳನ್ನು ಊರಿನ ಮುಖಂಡನಿಗೆ ಕೊಟ್ಟು ಮನೆಗೆ ಬರುತ್ತಾನೆ. ಆಗ ಮಗಳು, ನೀನು ದುಡಿದು ಬೇರೆಯವರಿಗೆ ಧಾನ್ಯಗಳನ್ನು ಕೊಟ್ಟು ಬರಿಗೈಲೀ ಬರುವುದು ನ್ಯಾಯವೇ? ಎಂದು ಕೇಳುತ್ತಾಳೆ. ಆಗ ಚೋಮ, ದುಡಿಯನ್ನು ಬಾರಿಸುವ ಮೂಲಕ ತನ್ನ ದುಃಖ, ದುಮ್ಮಾನ ಗಳನ್ನು ದೂರ ಮಾಡುತ್ತಾನೆ. ಮೈಕಲ್ ಜಾಕ್ಸ್‌ನ್ ಸಂಗೀತ ಹುಚ್ಚು ಹಿಡಿಸಿಕೊಂಡು ಸತ್ತುಹೋದ. ಆದರೆ, ಭಾರತದಲ್ಲಿ ಯಾವೊಬ್ಬ ಸಂಗೀತ ಗಾರನೂ ಹುಚ್ಚು ಹಿಡಿಸಿಕೊಂಡಿಲ್ಲ. ಬದಲಿಗೆ ಹುಚ್ಚು ಬಿಡಿಸಿದ್ದಾರೆ' ಎಂದು ಸಭೆಯಲ್ಲಿ ನಗೆ ಉಕ್ಕಿಸಿದರು.

`ಸಂಗೀತ ಕೇಳುವಿಕೆಯನ್ನು ಕಲಿಸುತ್ತದೆ. ಮನುಷ್ಯರನ್ನು ಮಾನ ವೀಯ ಮನುಷ್ಯರನ್ನಾಗಿ ಮಾಡಲು ಸಂಗೀತ ಬೇಕು. ರಾಜಕಾರಣಿಗಳು ಬರೀ ಮಾತನಾಡುತ್ತಾರೆ, ಯಾರ ಮಾತೂ ಕೇಳುವುದಿಲ್ಲ. ಆದ್ದರಿಂದ ಅವರಿಗೆ ಸಂಗೀತ ಕೇಳಿಸಬೇಕು' ಎಂದರು.

`ಸಂಗೀತ ವಿದ್ಯಾನಿಧಿ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಆರ್.ಕೆ.ಪದ್ಮನಾಭ್, `ಶಾಸ್ತ್ರೀಯ ಸಂಗೀತ ಸ್ಪರ್ಶವಿಲ್ಲದ ಸಿನಿಮಾ ಸಂಗೀತ ಸೊರಗಿ ಹೋಗಿದೆ. ಸಂಗೀತ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗ ಬಾರದು, ಮನರಂಜನಾ ಮಟ್ಟದಿಂದ ಮೇಲೆ ಹೋಗಬೇಕು. ಪ್ರತಿಯೊಬ್ಬರೂ ಶಾಸ್ತ್ರೀಯ ಸಂಗೀತ ವನ್ನು ಆಲಿಸಬೇಕು. ಶಾಸ್ತ್ರೀಯ ಸಂಗೀತ ಪ್ರತಿಯೊಂದು ಮಾಧ್ಯಮದಲ್ಲೂ ಬೆಳೆಯಬೇಕು' ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ವಿದ್ವಾನ್ ಉಳ್ಳೂರು ನಾಗೇಂದ್ರ ಉಡುಪ (ಮೃದಂಗ), ವಿದ್ವಾನ್ ಮಧೂರ್ ಪಿ.ಬಾಲಸುಬ್ರಹ್ಮಣ್ಯ (ಗಾಯನ), ಡಾ.ರಮಾ ವಿ. ಬೆಣ್ಣೂರ್ (ಸಂಗೀತ ವಿಮರ್ಶೆ), ವಿದ್ವಾನ್ ಡಾ.ಸಿ.ಎ. ಶ್ರೀಧರ್ (ವೇಣುವಾದನ), ವಿದುಷಿ ಎಂ.ಎಲ್.ಭಾರತಿ (ಗಾಯನ) ಅವರನ್ನು ಸನ್ಮಾನಿಸಿ, ಗೌರವಿಸ ಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರೊ.ಕೆ.ರಾಮಮೂರ್ತಿ ರಾವ್, ಪ್ರೊ.ಬಿ.ತಿಪ್ಪೇಸ್ವಾಮಿ ಅಭಿನಂದನಾ ಪತ್ರ ವಾಚಿಸಿದರು. ರಾಜ್ಯ ಸಂಗೀತ ವಿದ್ವಾನ್ ಎಸ್.ಮಹದೇವಪ್ಪ, ಉದ್ಯಮಿ ಕೆ.ವಿ.ಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.