ADVERTISEMENT

ಮಠಗಳಿಗೆ ಅನುದಾನ ಅಬಾಧಿತ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 12 ಮೇ 2012, 5:20 IST
Last Updated 12 ಮೇ 2012, 5:20 IST

ನಂಜನಗೂಡು: `ಸರ್ಕಾರ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಠಗಳು ಮಾಡುತ್ತಿವೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶುಕ್ರವಾರ ಶ್ಲಾಘಿಸಿದರು.

ಪಟ್ಟಣದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ನಿರ್ಮಿಸಿರುವ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಮಠಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ಮಂದಿಗೆ ವಿದ್ಯಾದಾನ, ಅನ್ನದಾನ ಮಾಡಿವೆ. ಅಂತಹ ಮಠ, ಮಂದಿರಗಳಿಗೆ ಸರ್ಕಾರ ಪ್ರತಿ ವರ್ಷವೂ ಅನುದಾನ ನೀಡುವುದನ್ನು ಮುಂದುವರಿಸಲಿದೆ. ಈ ಸಂಬಂಧ ಎಷ್ಟೇ ಟೀಕೆ ಟಿಪ್ಪಣಿ ಬಂದರೂ ಜಗ್ಗುವುದಿಲ್ಲ~ ಎಂದು ಹೇಳಿದರು.

ಸುತ್ತೂರು ಮಠವು ಜ್ಞಾನ ಮತ್ತು ಅನ್ನ ದಾಸೋಹದ ಮೂಲಕ ದೇಶ, ವಿದೇಶಗಳಲ್ಲಿಯೂ ಹೆಸರಾಗಿದೆ. ಸುತ್ತೂರು ಮಠ ಶ್ರದ್ಧೆ, ಗೌರವದ ಸಂಕೇತ. ಇದೊಂದು ಪವಿತ್ರ ಕ್ಷೇತ್ರವಾಗಿದೆ. ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಹೀಗಾಗಿ ಮಠವು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯದ ಬಾಗಿಲನ್ನು ತೆರೆದಿದೆ~ ಎಂದು ಪ್ರಶಂಸಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, `ಸುತ್ತೂರು ಮಠವು ಜಿಲ್ಲೆಯಲ್ಲಿ ಸಾಮರಸ್ಯ ಕೊರತೆ ಆಗದಂತೆ ನೋಡಿಕೊಂಡಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಸಾಮರಸ್ಯದ ಕೊರತೆ ಉಂಟಾದರೆ ಅಲ್ಲಿಗೆ ಹೋಗಿ ಸರಿಪಡಿಸುತ್ತದೆ. ಈ ಮಠವು ಸಮಾಜ, ಧರ್ಮ ಮತ್ತು ಮನುಷ್ಯರನ್ನು ಒಟ್ಟುಗೂಡಿಸುತ್ತದೆ~ ಎಂದು ಹೇಳಿದರು.

ಸಮಾರಂಭದಲ್ಲಿ ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಆದಿಚುಂಚನಗಿರಿಯ ಮೈಸೂರು ಶಾಖೆಯ ಸೋಮನಾಥ ಸ್ವಾಮೀಜಿ, ಮಲ್ಲನಮೂಲೆ ಶ್ರೀ  ಕಂಬಳೀಶ್ವರ ಮಠದ ಚನ್ನಬಸವ ಸ್ವಾಮೀಜಿ, ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠದ ಮಹಾಂತ ಸ್ವಾಮೀಜಿ, ಶಾಸಕರಾದ ಎಚ್. ಎಸ್.ಮಹದೇವಪ್ರಸಾದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.