ADVERTISEMENT

ಮತಕ್ಕಾಗಿ ಮಾತಿನ ಸಮರವೂ, ಪುಕ್ಕಟ್ಟೆ ರಂಜನೆಯೂ..

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 8:38 IST
Last Updated 26 ಏಪ್ರಿಲ್ 2013, 8:38 IST

ಮೈಸೂರು: ಚುನಾವಣೆ ಕಾಲದಲ್ಲಿ ಮತಕ್ಕಾಗಿ `ಮಾತಿನ ಸಮರ' ನಡೆಯದೇ ಹೋದರೆ ಹೇಗೆ? ಪರಸ್ಪರರನ್ನು ನಿಂದಿ ಸುವುದು, ಟೀಕಿಸುವುದು, ಆರೋಪಿಸಿರುವುದು, ಆಣೆ- ಪ್ರಮಾಣಕ್ಕೆ ಆಹ್ವಾನಿಸುವುದು, ಸವಾಲು-ಪ್ರತಿ ಸವಾಲು ಹಾಕದೇ ಹೋದರೆ ಚುನಾವಣೆ ನಡೆಯಿತು ಅನಿಸುವುದೇ ಇಲ್ಲ. ಇಂತಹ ಮಾತನ್ನು ಸತ್ಯ ಮಾಡಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ವಾಕ್ ಸಮರ ಮಾಡುತ್ತಿದ್ದಾರೆ.

ಮೈಸೂರು ನಗರ ಸೇರಿ ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರ ಗಳಿವೆ. ಇವುಗಳಲ್ಲಿ ಕೃಷ್ಣ ರಾಜ (ಕೆ.ಆರ್.) ಹಾಗೂ ಕೃಷ್ಣರಾಜ ನಗರ (ಕೆ.ಆರ್.ನಗರ), ಹುಣಸೂರು ವಿಧಾನಸಭಾ ಕ್ಷೇತ್ರ ಗಳಲ್ಲಿ ಅತೀ ಹೆಚ್ಚು ವಾಕ್ ಸಮರ ನಡೆಯುತ್ತಿದೆ. ಈ  ದೃಷ್ಟಿ ಯಿಂದ ಈ ಮೂರು ಕ್ಷೇತ್ರಗಳು ಹೆಚ್ಚು ಗಮನ ಸೆಳೆಯುತ್ತಿವೆ.

ಚುನಾವಣೆ ಘೋಷಣೆ ಆದ ದಿನದಿಂದಲೂ ಈ ಮೂರು ಕ್ಷೇತ್ರಗಳಲ್ಲಿ ಮಾತಿನ ಸಮರ ಜೋರಾಗಿಯೇ ಇದೆ. ಕೆ.ಆರ್.ಕ್ಷೇತ್ರದಲ್ಲಿ ಸಚಿವ ಎಸ್. ಎ.ರಾಮದಾಸ್ ವಿರುದ್ಧ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್, ಕೆಜೆಪಿಯ ಎಚ್.ವಿ.ರಾಜೀವ್ ತೊಡೆ ತಟ್ಟಿದ್ದಾರೆ. ಕೆ.ಆರ್. ನಗರದಲ್ಲಿ ಜೆಡಿಎಸ್‌ನ ಶಾಸಕ ಸಾ.ರಾ.ಮಹೇಶ್ ಎದುರಿಗೆ ಕಾಂಗ್ರೆಸ್‌ನ ದೊಡ್ಡಸ್ವಾಮೇಗೌಡ, ಕೆಜೆಪಿಯ ಕೆ.ಎನ್.ಬಸಂತ್ ಅಖಾಡಕ್ಕೆ ಇಳಿದಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ವಿರೋಧಿಗಳಿಂತ ಹೆಚ್ಚಾಗಿ ಸ್ವಪಕ್ಷೀಯರೇ ಆಕ್ರಮಣಕ್ಕೆ ಇಳಿದಿದ್ದಾರೆ. ಇಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಗುಂಪು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಂಡಾಯ ಅಭ್ಯರ್ಥಿ ಸಿ.ಟಿ.ರಾಜಣ್ಣ ಗುಂಪಿನ ನಡುವೆ ಆರೋಪ-ಪ್ರತ್ಯಾರೋಪ ಹೆಚ್ಚಾಗಿದೆ. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ  ಎಚ್.ಪಿ. ಮಂಜುನಾಥ್ ಬಚಾವ್ ಆಗಿದ್ದಾರೆ.

ಕೆ.ಆರ್.ನಲ್ಲಿ ಆಕ್ರಮಣ
ಕೆ.ಆರ್.ಕ್ಷೇತ್ರದಲ್ಲಿ ಹಿಂದಿನಿಂದಲೂ ರಾಮದಾಸ್ ಹಾಗೂ ಸೋಮಶೇಖರ್ ನಡುವೆ ಜಿದ್ದಾಜಿದ್ದಿ ಹೋರಾಟವಿದೆ. ಇವರಿಬ್ಬರಲ್ಲಿ ಯಾರೇ ಮಾಜಿ ಆದರೂ ಪರಸ್ಪರ ವಾಗ್ದಾಳಿ ನಡೆಸುವುದನ್ನು ನಿಲ್ಲಿಸುವುದೇ ಇಲ್ಲ. ಈ ಬಾರಿಗೆ ರಾಮದಾಸ್‌ಗೆ ಹೊಸ ವಿರೋಧಿ ಹುಟ್ಟಿಕೊಂಡಿದ್ದಾರೆ. ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಎಚ್.ವಿ.ರಾಜೀವ್ ಬಿಜೆಪಿ ತೊರೆದು ಕೆಜೆಪಿ ಸೇರಿದ್ದು, ಆ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ರಾಮದಾಸ್ ಹಾಗೂ ರಾಜೀವ್ ಬ್ರಾಹ್ಮಣರಾಗಿದ್ದು, ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಹೀಗಾಗಿ ರಾಮದಾಸ್ ವಿರುದ್ಧ ಸೋಮಶೇಖರ್, ರಾಜೀವ್ ಪ್ರತ್ಯೇಕವಾಗಿ ಪ್ರತಿನಿತ್ಯ ಆರೋಪ ಮಾಡುತ್ತಲೇ ಇದ್ದಾರೆ. ಇವುಗಳಿಗೆ ರಾಮದಾಸ್ ಕೂಡ ಪ್ರತ್ಯುತ್ತರ ನೀಡುತ್ತಲೇ ಇದ್ದಾರೆ.

ಕೆ.ಆರ್.ನಗರ ಕ್ಯಾತೆ
ಕೆ.ಆರ್.ನಗರ ಕ್ಷೇತ್ರ ಸಂಸದ ಅಡಗೂರು ಎಚ್.ವಿಶ್ವನಾಥ್ ಹಾಗೂ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಮಹೇಶ್ 22 ಸಾವಿರ ಮತಗಳ ಅಂತರದಿಂದ ವಿಶ್ವನಾಥ್ ಅವರನ್ನು ಸೋಲಿಸಿದ್ದರು. ಈ ಸೇಡನ್ನು ವಿಶ್ವನಾಥ್ ಅವರು ದೊಡ್ಡಸ್ವಾಮೇ ಗೌಡರ ಮೂಲಕ ತೀರಿಸಿಕೊಳ್ಳಲು ಹೊರಟ್ಟಿದ್ದಾರೆ. ಹೀಗಾಗಿ ವಿಶ್ವನಾಥ್ ಮತ್ತು ಮಹೇಶ್ ಮಧ್ಯೆ ಕಳೆದ ಆರು ತಿಂಗಳುಗಳಿಂದ ಆರೋಪ,  ಪ್ರತ್ಯಾರೋಪ, ಸವಾಲು, ಪ್ರತಿ ಸವಾಲು, ಕಪ್ಪಡಿಯಲ್ಲಿ ಆಣೆ ಪ್ರಮಾಣಕ್ಕಾಗಿ ಆಹ್ವಾನ ನೀಡುವ ಹೇಳಿಕೆಗಳು ಕ್ಷೇತ್ರದ ಜನತೆಯಲ್ಲಿ ಪುಕ್ಕಟೆ ಮನರಂಜನೆ ನೀಡುತ್ತಿವೆ.

ಜೆಡಿಎಸ್ ತೊರೆದು ಕೆಜೆಪಿಯಿಂದ ಸ್ಪರ್ಧಿಸಿರುವ ಕೆ.ಎನ್.ಬಸಂತ್ ಕೂಡ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಸಾ.ರಾ.ಮಹೇಶ್, ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ವಿಶ್ವನಾಥ್ ಮತ್ತು ಮಹೇಶ್ ನಡುವಿನ ಮಾತಿನ ದಾಳಿ ಫಲಿತಾಂಶದ ನಂತರವೂ ಮುಂದುವರಿಯುವ ಸಾಧ್ಯತೆಗಳಿವೆ.

ಹುಣಸೂರು ಕಮ್ಮಿ ಇಲ್ಲಪ್ಪ
ಹುಣಸೂರು ಕ್ಷೇತ್ರ ಜಿ.ಟಿ.ದೇವೇಗೌಡರ ಕಾರಣಕ್ಕಾಗಿ ಹೆಚ್ಚು ಸುದ್ದಿಯಲ್ಲಿದೆ. ಇವರು ಮರಳಿ ಜೆಡಿಎಸ್ ಸೇರಿದ ದಿನದಿಂದಲೂ ಸ್ವಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿತು. ಇದು ತಣ್ಣಗಾಗಲೇ ಇಲ್ಲ. ಜಿ.ಟಿ.ಡಿ ಹುಣಸೂರು ಬಿಟ್ಟು ಚಾಮುಂಡೇಶ್ವರಿಗೆ ವಲಸೆ ಬರಬೇಕಾಯಿತು. ಈ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ನ ಕುಮಾರಸ್ವಾಮಿಯನ್ನು ಅಭ್ಯರ್ಥಿಯನ್ನಾಗಿ ಮಾಡಿ ಎದುರಾಳಿ ಸಿ.ಟಿ.ರಾಜಣ್ಣ ಗುಂಪಿಗೆ ಚಳ್ಳೆಹಣ್ಣು ತಿನ್ನಿಸಿದರು. `ಧರೆಗೆ ದೊಡ್ಡವರಾದ ಜಿ.ಟಿ.ದೇವೇಗೌಡರ ಕುತಂತ್ರದಿಂದ ನನಗೆ ಟಿಕೆಟ್ ಕೈ ತಪ್ಪಿತು' ಎಂದು ಸಿ.ಟಿ.ರಾಜಣ್ಣ ವ್ಯಂಗ್ಯವಾಡುತ್ತಾರೆ. `ಪಕ್ಷ ವಿರೋಧಿಗಳೇ, ಬೇಗ ಪಕ್ಷ ಬಿಟ್ಟು ತೊಲಗಿ' ಎಂದು ಜಿ.ಟಿ.ಡಿ ಗುಡುತ್ತಿದ್ದಾರೆ.

ಒಗ್ಗರಣೆ ಇಲ್ಲದಿದ್ದರೆ ಹೇಗೆ?
ಈ ಮೂರು ಕ್ಷೇತ್ರಗಳಲ್ಲಿ ಅತೀ ಹೆಚ್ಚು ವಾಕ್ ಸಮರ ನಡೆಯುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳುವಂತಿಲ್ಲ. ಆದರೆ ಅದು ಮಿತಿಮೀರಿಲ್ಲ. ಸಾಂಬರ್‌ಗೆ ಒಗ್ಗರಣೆ ಹಾಕಿದಂತಿದೆ, ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.