ADVERTISEMENT

ಮಳೆಗೆ ಒಡೆದ ನಾಲೆ, ಕುಸಿದ ಸೇತುವೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:45 IST
Last Updated 14 ಅಕ್ಟೋಬರ್ 2011, 5:45 IST

ಸಾಲಿಗ್ರಾಮ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಾಲಿಗ್ರಾಮ ಹೊರ ವಲಯದಲ್ಲಿ ಇರುವ ಚಾಮರಾಜ ಬಲದಂಡೆ ಮತ್ತು ಎಡದಂಡೆ ನಾಲೆಯ ಏರಿಗಳು ಕುಸಿದ ಪರಿಣಾಮ ಬತ್ತದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಮಿರ್ಲೆ ಗ್ರಾಮದ ಹಿರಿನಾಲೆಯ ಏರಿಯೂ ಕುಸಿದು ಬಿದ್ದಿರುವುದಲ್ಲದೆ ಸಾಲಿಗ್ರಾಮ-ಮಾಳನಾಯಕನಹಳ್ಳಿ ರಸ್ತೆಯಲ್ಲಿ ಬರುವ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸೇರಿದ ಹಳೆಯ ಹೊಸ ನಾಲೆಯ ಚಿಕ್ಕ ಸೇತುವೆಯ ಮೇಲೆ ಭಾರಿ ಪ್ರಮಾಣದ ನೀರು ಹರಿದ ಪರಿ ಣಾಮ ಸೇತುವೆ ಕುಸಿದು ಬಿದ್ದಿದೆ. ಇದರಿಂದ ರೈತ ಸಮುದಾಯ ಆತಂಕಗೊಂಡಿದೆ.

ಚಾಮರಾಜ ಎಡದಂಡೆ ನಾಲೆಯ 8ನೇ ಮೈಲಿಯ 4ನೇ ಗ್ರೇಡ್‌ನ ಒಳಗಟ್ಟೆ ಹಾಗೂ 9ಮೈಲಿಯ 1ಗ್ರೇಡ್‌ನ ಒಳಗಟ್ಟೆ. 4ನೇ ಮೈಲಿಯ 5ನೇ ಗ್ರೇಡ್‌ನ ಒಳಗಟ್ಟೆ ಅಲ್ಲದೆ 11ನೇ ಮೈಲಿಯ ಅಂಕನಹಳ್ಳಿ ಬಳಿ ಇರುವ ಕಾಲುವೆ ಏರಿ ಅಧಿಕ ನೀರಿನ ಒತ್ತಡಕ್ಕೆ ಕುಸಿದು ಬಿದ್ದಿದೆ. ನಾಟನಹಳ್ಳಿಯ   ಹೊರ ವಲಯದಲ್ಲಿ ಇರುವ ಹಿರಿನಾಲೆಯ 4ನೇ ಮೈಲಿಯ ತಡೆ ಗೋಡೆ ಕೂಡಾ ಕುಸಿದು ಬಿದ್ದಿದೆ. ಜತೆಗೆ ರಾಮಸಮುದ್ರ ನಾಲೆಯ 17 ಮತ್ತು 23ನೇ ಮೈಲಿಯ ಕಾಲುವೆ ಏರಿ ಭಾರಿ ಮಳೆಗೆ ನೆಲಕಚ್ಚಿವೆ. ಅಲ್ಲದೆ ಚಾಮರಾಜ ಬಲದಂಡೆ ನಾಲೆಯ 3ನೇ ಬ್ರಾಂಚ್‌ನ ಏರಿ ಕುಸಿದು ಬಿದ್ದ ಪರಿಣಾಮ ರೈತರು ಕಂಗಾಲಾಗಿದ್ದಾರೆ.

ವರುಣನ ಆರ್ಭಟಕ್ಕೆ ನಾಲಾ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರು ಬತ್ತದ ಬೆಳೆ ಕಳೆದುಕೊಳ್ಳುವ ಜತೆಗೆ ಫಲವತ್ತಾದ ಮಣ್ಣುನ್ನು ಕಳೆದು ಕೊಂಡು ಪರಿತಪ್ಪಿಸುವಂತಾಗಿದೆ. ಬೇಸಾಯ ಮಾಡುವ ಭೂಮಿಯಲ್ಲಿ ಹಳ್ಳಗಳು ನಿರ್ಮಾಣಗೊಂಡಿದ್ದು ಇದನ್ನು ರೈತರು ಸರಿ ಪಡಿಸಲು  ಸಾವಿರಾರು ರೂಪಾಯಿ ಖರ್ಚು ಮಾಡುವ ಸ್ಥಿತಿ ಎದುರಾಗಿದೆ ಎಂದು ಹಲವು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಬೆಳೆ ಹಾನಿ: ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಹನಸೋಗೆ ಸುತ್ತ ಮುತ್ತ ಕಳೆದ ಮೂರು ದಿನಗಳಿಂದ            ಬೀಳುತ್ತಿರುವ ಭಾರಿ ಮಳೆಯಿಂದಾಗಿ  ಬುಧವಾರ ರಾತ್ರಿ ಕಟ್ಟೇಪುರ ನಾಲೆ ಒಡೆದು ಹೋಗಿರುವ ಪರಿಣಾಮ ನಾಲೆಯ ಅಚ್ಚುಕಟ್ಟು ಪ್ರದೇಶದ ಸುಮಾರು 50 ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಬಾಳೆ ಮತ್ತು ಬತ್ತದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ತಾಲ್ಲೂಕಿನ ಚುಂಚನಕಟ್ಟೆ, ಸಾಲಿಗ್ರಾಮ, ಮಿರ್ಲೆ, ಹೊಸಅಗ್ರಹಾರ, ಹೆಬ್ಬಾಳು ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ದಿನವಿಡಿ ಭಾರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೆರೆ ಕಟ್ಟೆಗಳು ತುಂಬಿವೆ. ನಾಲೆಗಳಲ್ಲಿ ನೀರಿನ ಹರಿವು ಹೆಚ್ಚುತ್ತಿರುವ ಕಾರಣ ಚಿಕ್ಕಹನಸೋಗೆಯ 33ನೇ  ಮೈಲಿಗಲ್ಲಿನ ಬಳಿ ಕಟ್ಟೇಪುರ ನಾಲೆ ಒಡೆದು ಹೋಗಿದೆ. ಈ ನಾಲೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರು ಬೆಳೆ ಕಳೆದುಕೊಂಡು  ಕಂಗಾಲಾಗಿದ್ದಾರೆ.

ಕಟ್ಟೇಪುರದ 33ನೇ ಮೈಲಿಗಲ್ಲು ಕುಶಾಲನಗರದ ಹಾರಂಗಿ ಪುನರ್ ವಸತಿ ವಿಭಾಗಕ್ಕೆ ಸೇರ್ಪಡೆಗೊಂಡಿದ್ದು ವಿಷಯ ತಿಳಿದರೂ ಯಾವುದೇ ಎಂಜಿನಿಯರ್‌ಗಳು ಇತ್ತಕಡೆ ತಿರುಗಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.