ADVERTISEMENT

ಮಾದಿಗರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:30 IST
Last Updated 18 ಡಿಸೆಂಬರ್ 2012, 10:30 IST

ಎಚ್.ಡಿ.ಕೋಟೆ: ಮಾದಿಗ ಮೀಸಲಾತಿ ಹೋರಾಟ ಸಮಿತಿಯವರು ಬೆಳಗಾವಿಯ ಸುವರ್ಣಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಹಾಗೂ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಬಾಬು ಜಗಜೀವನ್ ರಾಂ ವಿಚಾರ ವೇದಿಕೆಯವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ಎಂ. ಮಾದಯ್ಯ ಮಾತನಾಡಿ ಬೆಳಗಾವಿಯಲ್ಲಿ ಶಾಂತಿಯುತ ಹೋರಾಟ ಮಾಡುತ್ತಿದ್ದ  ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಗಲಾಟೆ ಮಾಡಿದರೆ, ಮಾದಿಗ ಜನಾಂಗದವರ ಮೇಲೆ ಲಾಠಿ ಪ್ರಹಾರ ಮಾಡಿ ಪೋಲಿಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು. ಮಾದಿಗರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕು. ದೌರ್ಜನ್ಯಕ್ಕೆ ಸಿಲುಕಿರುವ ಮಾದಿಗ ಜನಾಂಗಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನಾಕಾರರು ತಹಶೀಲ್ದಾರ್ ಡಿ.ಎಸ್. ಶಿವಕುಮಾರಸ್ವಾಮಿಅವರಿಗೆ ಮನವಿ ಸಲ್ಲಿಸಿದರು.

ಗೌರವಾಧ್ಯಕ್ಷ ಸಿ. ತಿಮ್ಮಯ್ಯ, ಹಿರೇಹಳ್ಳಿ ಪ್ರಕಾಶ್, ಉಡ ನಾಗರಾಜು, ಸಣ್ಣಸ್ವಾಮಿ, ನಾಗಯ್ಯ, ಶಿವಯ್ಯ, ಬೆಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಬೂದನೂರು ನಾಗರಾಜು, ಬೋಗೇಶ್ವರ ಕಾಲೊನಿ, ಕಾಳಪ್ಪಾಜಿ, ಚಿಕ್ಕಸ್ವಾಮಿ, ಯಡತೊರೆ ಚನ್ನಪ್ಪ, ಮಹದೇವ ಕೃಷ್ಣಾಪುರ, ಚಿಕ್ಕಸ್ವಾಮಿ, ಜವರಪ್ಪ, ಶಿವಲಿಂಗು, ಹಂಚೀಪುರ ಸುರೇಶ್, ನಾಗರಾಜು, ಡಿ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.