ADVERTISEMENT

ಮಾಲಿನ್ಯದ ಆಗರ ಹೊನ್ನೇನಹಳ್ಳಿ

ಸಾಲಿಗ್ರಾಮ ಯಶವಂತ್
Published 10 ಏಪ್ರಿಲ್ 2013, 6:26 IST
Last Updated 10 ಏಪ್ರಿಲ್ 2013, 6:26 IST

ಸಾಲಿಗ್ರಾಮ: ದುರ್ವಾಸನೆ ಬೀರುವ ಚರಂಡಿಗಳು. ಮನೆಗಳ ಮುಂದೆಯೇ ತಿಪ್ಪೆಗುಂಡಿಗಳು ಇಲ್ಲಿ ಸಾಮಾನ್ಯ. ಇದನ್ನು ನೊಡಿಯೂ ಸ್ಥಳೀಯ ಆಡಳಿತ ಕೈಚೆಲ್ಲಿ ಕುಳಿತಿದೆ.

ಸಮೀಪದ ಹೊನ್ನೇನಹಳ್ಳಿ ಗ್ರಾಮದ ಚಿತ್ರಣವಿದು. ಮಲಿನ ವಾತಾವರಣ ಇರುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕುಡಿಯುವ ನೀರಿನ ಸರಬರಾಜು ಸರಿಯಾಗಿ ಇಲ್ಲದೇ ಇರುವುದರಿಂದ ಮಹಿಳೆಯರು ತೆರೆದ ಬಾವಿಗಳನ್ನು ಹುಡುಕಿಕೊಂಡು ಓಡಾಡುವುದು ಸಾಮಾನ್ಯವಾಗಿದೆ. ಆದರೂ ಸ್ಥಳೀಯ ಆಡಳಿತ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.

ಕೆ.ಆರ್.ನಗರ ತಾಲ್ಲೂಕಿನ ಗಡಿಭಾಗದ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸುಮಾರು 13ಕ್ಕೂ ಹೆಚ್ಚಿನ ಗ್ರಾಮಗಳು ಸೇರ್ಪಡೆ ಗೊಂಡಿದ್ದು ಇಲ್ಲಿಯವರೆಗೆ ಆಡಳಿತ ನಡೆಸಿದವರು ಪಂಚಾಯಿತಿ ಕಚೇರಿ ಮುಂಭಾಗದ ಚರಂಡಿಗಳನ್ನೂ ಸ್ವಚ್ಛ ಮಾಡಿಸಲು ಮುಂದಾಗಿಲ್ಲ.

ಗ್ರಾಮ ನೈರ್ಮಲ್ಯದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕಾದ ಸ್ಥಳೀಯ ಆಡಳಿತ ಜವಾಬ್ದಾರಿ ಮರೆತು ಜನರಿಗೆ ಮೂಲ ಸೌಲಭ್ಯ ಒದಗಿಸಲು ಮುಂದಾಗದೇ ಉದಾಸೀನ ಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಕೂಡಾ ನೈರ್ಮಲ್ಯೀಕರಣದ ಕಡೆ ಗಮನ ನೀಡುತ್ತಿಲ್ಲ ಎಂದು ಗ್ರಾಮಸ್ಥ ಮನೋಹರ ಆರೋಪಿಸಿದ್ದಾರೆ.

ಕೊಳವೆ ಬಾವಿಯ ಮೂಲಕ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಆದರೆ ವಾರದಲ್ಲಿ ಎರಡು ದಿನ ನೀರು ಬರುವುದಿಲ್ಲ. ಅಂದು ಮಹಿಳೆಯರು ತೆರೆದ ಬಾವಿಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ಅಲೆಯುವ ಪರಿಸ್ಥಿತಿ ಇದೆ. ಇದನ್ನು ಸ್ಥಳೀಯ ಆಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯಾೀಜನವಾಗಿಲ್ಲ ಎಂದು ಯುವಕರು ದೂರಿದ್ದಾರೆ.

ಪೌರ ಕಾರ್ಮಿಕರ ಸಮಸ್ಯೆ ಎದುರಾದರೆ ಬೇರೆ ಕಡೆಯಿಂದ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ಕರೆ ತಂದು ಸ್ವಚ್ಛತೆ ಮಾಡಿಸಬಹುದು ಎಂಬ ನಿಯಮವಿದ್ದರೂ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.