ಎಚ್.ಡಿ. ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಮೀನಿನ ಟೆಂಡರ್ ಪಡೆದಿರುವ ಗಿರಿಜನ ಮೀನುಗಾರರ ಸಹಕಾರ ಸಂಘದಿಂದ ನೇಮಿಸಲ್ಪಟ್ಟಿರುವ ಕಾವಲುಗಾರರು ಮತ್ತು ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರ ನಡುವೆ ಘರ್ಷಣೆ ಸಂಭವಿಸಿ ನಾಲ್ವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ದಾಖಲಾಗಿದ್ದಾರೆ.
ಘಟನೆಯಲ್ಲಿ ಸಣ್ಣಪ್ಪ ನಾಯಕ, ರಾಜೇಶ್, ಮುರುಗೇಶ್ ಮತ್ತು ವೆಂಕಟೇಶ್ ಗಾಯಗೊಂಡಿದ್ದಾರೆ.
ಕಬಿನಿ ಹಿನ್ನೀರಿನ ಮಾಸ್ತಿಗುಡಿ ಬಳಿ ಅಕ್ರಮವಾಗಿ ಮೀನು ಹಿಡಿದುಕೊಂಡು ಹೋಗುತ್ತಿದ್ದರು ಎನ್ನಲಾದ ಕೆಲವರನ್ನು ಗಿರಿಜನ ಮೀನುಗಾರರ ಸಹಕಾರ ಸಂಘದಿಂದ ನೇಮಿಸಲ್ಪಟ್ಟ ಕಾವಲುಗಾರರು ತಡೆದಾಗ ಘರ್ಷಣೆ ನಡೆದಿದೆ. ಸ್ಥಳಕ್ಕೆ ಪೊಲೀಸರು ತೆರಳಿದ ಕೂಡಲೇ ಆರೋಪಿಗಳು ಪರಾರಿಯಾಗಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಕಾವೇರ, ಪಟ್ಟಣ ಪಂಚಾಯಿತಿ ಸದಸ್ಯ ಎಚ್.ಸಿ. ನರಸಿಂಹಮೂರ್ತಿ ಭೇಟಿ ನೀಡಿದ್ದರು. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.