ADVERTISEMENT

ಮೇಟಿಕುಪ್ಪೆ ಹಾಡಿ; ಸಮಸ್ಯೆಗಳ ರಾಡಿ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 7:30 IST
Last Updated 21 ಮಾರ್ಚ್ 2011, 7:30 IST

ಎಚ್.ಡಿ.ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ಗಿರಿಜನ ಹಾಡಿಯಲ್ಲಿ ಮೂಲಸೌಕರ್ಯಗಳು ಇಲ್ಲದೇ ಇಲ್ಲಿನ ಜನರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ.ಕುಡಿಯುವ ನೀರಿಗಾಗಿ ಬೋರ್ವೆಲ್‌ಗಳನ್ನು ಆಶ್ರಯಿಸಿದ್ದು, ಬೋರ್ವೆಲ್‌ಗಳು ಆಗಿಂದಾಗ್ಗೆ ಕೆಟ್ಟುಹೋಗುತ್ತದೆ. ಇಂತಹ ಸಂದರ್ಭಗಳಲ್ಲಿ ಕುಡಿಯುವ ನೀರಿಗಾಗಿ ಹೆಬ್ಬಳ್ಳ ಜಲಾಶಯಕ್ಕೆ ಹೋಗಬೇಕು. ಇಲ್ಲವೇ ಅಕ್ಕಪಕ್ಕದ ರೈತರು ನಿರ್ಮಿಸಿರುವ ಕೃಷಿ ಹೊಂಡದ ನೀರನ್ನು ಆಶ್ರಯಿಸಬೇಕಾದ ಪರಿಸ್ಥಿತಿ  ನಿರ್ಮಾಣವಾಗಿದೆ.

ಮೇಟಿಕುಪ್ಪೆ ಹಾಡಿಯು ಕಾಡಿನಂಚಿನಲ್ಲಿರುವುದರಿಂದ ಆನೆಗಳು ಹಾಗೂ ಇನ್ನಿತರ ಕಾಡು ಪ್ರಾಣಿಗಳು ದಾಳಿ ನಡೆಸುತ್ತಿದ್ದು, ಜನರು ಜೀವ ಭಯದಿಂದ ಬದುಕುತ್ತಿದ್ದಾರೆ.ಇಲ್ಲಿನ ನಿವಾಸಿಗಳಿಗೆ ಸರ್ಕಾರದಿಂದ ನಿರ್ಮಿಸಿರುವ 20ಕ್ಕೂ ಮನೆಗಳು ಕುಸಿದು ಬಿದ್ದಿವೆ. ಇನ್ನುಳಿದ ಎಲ್ಲಾ ಮನೆಗಳು ಬಿರುಕು ಬಿಟ್ಟಿದ್ದು, ಈ ಮನೆಗಳಲ್ಲಿ ಗಿರಿಜನರು ವಾಸಿಸಲು ಭಯಪಡುತ್ತಿದ್ದಾರೆ. ಕೆಲವರು ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆ ಬಂದರೆ ಗುಡಿಸಲಿಗೆ ನೀರು ತುಂಬಿಕೊಳ್ಳುತ್ತದೆ.

ಮೇಟಿಕುಪ್ಪೆ ಹಾಡಿಯಲ್ಲಿ ರಸ್ತೆಗಳೇ ಇಲ್ಲ. ಚರಂಡಿಗಳು ನಿರ್ಮಾಣವಾಗಿಲ್ಲ. ಬೀದಿ ದೀಪಗಳು ಬೆಳಗುತ್ತಿಲ್ಲ. ಇಷ್ಟೆಲ್ಲಾ ಸೌಲಭ್ಯಗಳಿಂದ ವಂಚಿತರಾಗಿರುವ ಗಿರಿಜನರ ಗೋಳು ಕೇಳುವವರು ಇಲ್ಲ. ಯಾವೊಬ್ಬ ಜನಪ್ರತಿನಿಧಿಯೂ ಇತ್ತ ತಲೆ ಹಾಕಿಲ್ಲ. ‘ಗಿರಿಜನರ ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದ್ದರೂ ಹಾಡಿಗಳಲ್ಲಿ ವಾಸಿಸುವ ಗಿರಿಜನರ ಬದುಕು ಸುಧಾರಿಸಿಲ್ಲ. ಇದು ಸಮರ್ಪಕವಾಗಿ ಬಳಕೆಯಾಗದೇ ಇರುವುದು ಬೇಸರವನ್ನುಂಟುಮಾಡಿದೆ ಎಂಬುದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಕಲಾವತಿ ಗುರುಸ್ವಾಮಿ ಮತ್ತು ವಿಶ್ವನಾಥ್ ಅವರ ಆರೋಪ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ನಂದಿನಿಚಂದ್ರಶೇಖರ್ ‘ಸರ್ಕಾರದಿಂದ ಬರುವ ಯೋಜನೆಗಳು ಮದ್ಯವರ್ತಿಗಳ ಹಾವಳಿಯಿಂದ ಮಣ್ಣುಪಾಲಾಗುತ್ತಿದ್ದು, ಗಿರಿಜನರ ಅಭಿವೃದ್ಧಿಗೆ ಸರಿಯಾಗಿ ಬಳಕೆಯಾಗುತ್ತಿಲ್ಲ’ ಎಂದರು.  ‘ಓಟು ಕೇಳಾಕ ಮಾತ್ರ ಇಲ್ಲಿಗೆ ಬತ್ತಾರೆ, ನಮಗ ಯಾರು ಏನು ಮಾಡಕಿಲ್ಲ’ ಎಂಬುದು ಗಿರಿಜನರ ಆರೋಪ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.