ADVERTISEMENT

ಮೈದುಂಬಿಕೊಂಡಿರುವ ಹಳೆಪುರ ಕೆರೆ

ಎಚ್.ಎಸ್.ಸಚ್ಚಿತ್
Published 4 ಆಗಸ್ಟ್ 2013, 6:40 IST
Last Updated 4 ಆಗಸ್ಟ್ 2013, 6:40 IST

ಹುಣಸೂರು: ತಾಲ್ಲೂಕಿನ ಲಕ್ಷ್ಮಣತೀರ್ಥ ನದಿಯನ್ನು ಅವಲಂಬಿಸಿ ಹತ್ತಾರು ಕೆರೆಗಳಿದ್ದು, ಅದರಲ್ಲಿ ಹಳೆಪುರ ಕೆರೆಯೂ ಒಂದಾಗಿದೆ. ಕಳೆದ ಸಾಲಿನಲ್ಲಿ ಮುಂಗಾರು ಕೊರತೆಯಿಂದಾಗಿ ಖಾಲಿ ಆಗಿದ್ದ ಕೆರೆ ಈ ಬಾರಿ ಸಂಪೂರ್ಣ ಭರ್ತಿಯಾಗುವತ್ತ ಸಾಗಿದೆ.

ಚಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಳೆಪುರ ಕೆರೆ 20 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಇದರ ಅಚ್ಚುಕಟ್ಟು ಪ್ರದೇಶದಲ್ಲಿ 500ರಿಂದ 600 ಎಕರೆ ಭೂಮಿ ಹೊಂದಿದೆ. ಹನಗೋಡು ಅಣೆಕಟ್ಟೆಯ ಉದ್ದೂರು ನಾಲೆಯ ನೀರನ್ನು ಹಳೆಪುರ ಕೆರೆ ಆಸ್ರಯಿಸಿದೆ.

ಹಳೆಪುರ ಕೆರೆಯಿಂದ ಬಿಳಿಕೆರೆ ಹೋಬಳಿ ಕೇಂದ್ರದ ಕೆಲವು ಭಾಗದ ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ಇದ್ದರೂ ನೀರಾವರಿ ಇಲಾಖೆಯ ಅಸಮರ್ಪಕ ಕಾಮಗಾರಿಯಿಂದಾಗಿ ನೀರು ಹರಿದಿಲ್ಲ. ಹಳೆಪುರ ಕೆರೆಯಿಂದ ಪೂರ್ಣಯ್ಯ ನಾಲೆ ನಿರ್ಮಿಸಲಾಗಿದೆ. ಆದರೆ ಈ ನಾಲೆ ಸಂಪೂರ್ಣಗೊಂಡಿಲ್ಲ. ಈ ನಾಲೆಯನ್ನು ನೀರಾವರಿ ಇಲಾಖೆ ಸಂಪೂರ್ಣಗೊಳಿಸಿದಲ್ಲಿ ಕೆರೆಯಿಂದ ಹೆಚ್ಚುವರಿ ನೀರನ್ನು ಧರ್ಮಾಪುರ ಜಿಲ್ಲಾ ಪಂಚಾಯಿತಿ ಮತ್ತು ಬಿಳಿಕೆರೆ ಹೋಬಳಿಯ ಕೆಲವು ಭಾಗಕ್ಕೆ ನೀರು ತಲಪಿಸಬಹುದು ಎನ್ನುತ್ತಾರೆ ಶಂಕರೇಗೌಡ.
ದೇವರಾಜ ಅರಸು ಅವರ ಅವಧಿಯಲ್ಲಿ ತಾಲ್ಲೂಕಿನ ಹನಗೋಡು ಅಣೆಕಟ್ಟೆಯಿಂದ ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ಕಲ್ಲಿಸಲಾಗಿದೆ. ಇದರಿಂದ ತಾಲ್ಲೂಕಿನ ಧರ್ಮಾಪುರ ಜಿ.ಪಂ ಕ್ಷೇತ್ರದ ಬಹುತೇಕ ಎಲ್ಲಾ ಕೆರೆಗಳಿಗೂ ನೀರು ಸೇರಿಸಬಹುದಾಗಿದೆ. ಈ ಮಾದರಿ ರಾಜ್ಯದಲ್ಲಿ ಎಲ್ಲಿಯೂ ಕಾಣುವುದಿಲ್ಲ ಎನ್ನುತ್ತಾರೆ ಬೆಂಕಿಪುರ ಗ್ರಾಮದ ಮಹದೇವ್.

ಒತ್ತುವರಿ: ಹಳೆಪುರ ಕೆರೆ 22 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿರುವುದು ದಾಖಲೆಯಲ್ಲಿ ಮಾತ್ರ ಸಿಗುತ್ತದೆ. ಆದರೆ ವಾಸ್ತವಿಕವಾಗಿ ಸುತ್ತಲಿನ ಭೂ ಮಾಲಿಕರು ಒತ್ತುವರಿ ಮಾಡಿಕೊಂಡು ಕೆರೆಯ ವ್ಯಾಪ್ತಿ ಕುಗ್ಗಿದೆ.

ತಾಲ್ಲೂಕಿನ ಈ ಹಿಂದೆ ತಹಶೀಲ್ದಾರ್ ಲೋಕನಾಥ್ ಅವರ ಅವಧಿಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ನಡೆಯಿತಾದರೂ ನಂತರದಲ್ಲಿ ಸ್ಥಗಿತವಾಗಿದೆ. ಎನ್ನುತ್ತಾರೆ ಸಂತೆಕೆರೆ ಕೋಡಿ ನಿವಾಸಿ ಸುರೇಂದ್ರ.

ಸೇತುವೆ ದುರಸ್ಥಿ: ಕೆರೆ ಏರಿಗೆ ಸಂಪರ್ಕಿಸಲು ಕೆರೆ ಕೋಡಿ ಬಳಿ ನಿರ್ಮಿಸಿರುವ ಕಿರು ಸೇತುವೆಗೆ ತಡೆಗೋಡೆಗಳಿಲ್ಲ. ಲೊಕೋಪಯೋಗಿ ಇಲಾಖೆ ಕಾಮಗಾರಿ ಸಮರ್ಪಕವಾಗಿ ಮಾಡಿದ್ದರೆ  ತಡೆಗೋಡೆಗೆ ಬಿಟ್ಟ ಕಬ್ಬಿಣದ ಕಂಬಿಗಳು ಕಳ್ಳಕಾಕರ ಮನೆ ಸೇರುತ್ತಿರಲಿಲ್ಲ ಎಂದು ಕೆಂಪೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.