ಮೈಸೂರು: ಮೈಸೂರು ತಾಲ್ಲೂಕು ತಂಡ ಇಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲೂ ಸಮಗ್ರ ತಂಡ ಪ್ರಶಸ್ತಿ ಗಳಿಸಿತು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮೈಸೂರು ವಿಭಾಗದ ಪದವಿ ಪೂರ್ವ ಶಿಕ್ಷಣ ಇಲಾಖೆ, ವಿವಿಎಸ್ ಗೋಲ್ಡನ್ ಜ್ಯೂಬಿಲಿ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ 2011-12ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರು ತಾಲ್ಲೂಕು ತಂಡ ಉತ್ತಮ ತಂಡವಾಗಿ ಹೊರಹೊಮ್ಮಿತು.
ಮೈಸೂರು ತಾಲ್ಲೂಕು ತಂಡ ಬಾಲಕಿಯರ ವಿಭಾಗದಲ್ಲಿ 76 ಅಂಕಗಳಿಸಿದರೆ, ಬಾಲಕರ ವಿಭಾಗದಲ್ಲಿ 83 ಅಂಕ ಗಳಿಸಿ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಮೈಸೂರು ಟೆರಿಶಿಯನ್ ಕಾಲೇಜಿನ ಎಸ್.ಎಲ್.ಸ್ವಾತಿ ಮತ್ತು ಪಿ.ಬಿ.ಸುಮಿತ್ರ 13 ಅಂಕಗಳಿಸಿ ಬಾಲಕಿಯರ ವಿಭಾಗದಲ್ಲಿ ಜಂಟಿಯಾಗಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಹಂಚಿಕೊಂಡರು.
ಮೈಸೂರು ತಾಲ್ಲೂಕು ರಾಮಕೃಷ್ಣ ವಿದ್ಯಾಶಾಲೆಯ ನಿಹಾಲ್ ಗಣಪತಿ, ವಿಜಯ್ ಎಲ್.ಬಾಲರೆಡ್ಡಿ ಹಾಗೂ ಹುಣಸೂರು ತಾಲ್ಲೂಕು ಕೇಂಬ್ರಿಡ್ಜ್ ಕಾಲೇಜಿನ ಎಂ.ಅರವಿಂದ್, ಶಾಸ್ತ್ರಿ ಕಾಲೇಜಿನ ನಂದೀಶ್‌ಕುಮಾರ್ ತಲಾ 10 ಅಂಕಗಳಿಸಿ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿದರು.
ವೇಗದ ಓಟಗಾರರು: ಬಾಲಕಿಯರ ವಿಭಾಗದಲ್ಲಿ ಮೈಸೂರು ಟೆರಿಶಿಯನ್ ಕಾಲೇಜಿನ ಬೇಬಿ ಸುಮಯ ಹಾಗೂ ಬಾಲಕರ ವಿಭಾಗದಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ನಿಹಾಲ್ ಗಣಪತಿ 100 ಮೀ ಓಟ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದರು.
ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲೆಯ ಒಟ್ಟು 7 ತಾಲ್ಲೂಕುಗಳು, 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. 20ಕ್ಕೂ ಹೆಚ್ಚು ಅಥ್ಲೆಟಿಕ್ ಸ್ಪರ್ಧೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.