ADVERTISEMENT

ಮೈಸೂರು ಮಹಾನಗರ ಪಾಲಿಕೆ: ವಲಯ ಕಚೇರಿ 9ರಿಂದ 7ಕ್ಕೆ ಇಳಿಕೆ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 10:13 IST
Last Updated 6 ಡಿಸೆಂಬರ್ 2012, 10:13 IST

ಮೈಸೂರು: ಕರ್ನಾಟಕ ಮಹಾನಗರ ಪಾಲಿಕೆಗಳ ವೃಂದ ಮತ್ತು ನೇಮಕಾತಿಯ ಸಾಮಾನ್ಯ ನಿಯಮ ಜಾರಿಗೆ ಬಂದಿದ್ದು, ಮೈಸೂರು ಮಹಾನಗರ ಪಾಲಿಕೆಯಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ನಗರದ ಒಂಬತ್ತು ವಲಯ ಕಚೇರಿಗಳನ್ನು ಏಳಕ್ಕೆ ಇಳಿಸುವ ಪುನರ್ ರಚನೆ ಕಾರ್ಯ ಸದ್ಯದಲ್ಲೇ ಆರಂಭಗೊಳ್ಳಲಿದೆ.

ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕೆಲ ವರ್ಷಗಳ ಹಿಂದೆ ಪಾಲಿಕೆಯನ್ನು ಒಂಬತ್ತು ವಲಯಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರತಿ ವಲಯ ಕಚೇರಿಗಳ ನಿರ್ವಹಣೆಯ ಅಧಿಕಾರವನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನೀಡಲಾಗಿತ್ತು. ಈಗ ಜಾರಿಗೊಂಡಿರುವ ನೂತನ ನಿಯಮ 1.20 ಲಕ್ಷ ಜನಸಂಖ್ಯೆಗೆ ಒಂದರಂತೆ ವಲಯ ಕಚೇರಿ ಸ್ಥಾಪಿಸಲು ಸೂಚಿಸಿದೆ. ಹೀಗಾಗಿ ನಗರದಲ್ಲಿ ಶೀಘ್ರವೇ ಏಳು ವಲಯ ಕಚೇರಿಗಳು ಸ್ಥಾಪನೆಯಾಗಲಿದ್ದು, ಕೆಎಎಸ್ ದರ್ಜೆಯ ಅಧಿಕಾರಿಗಳು ಮುಖ್ಯಸ್ಥರಾಗಿ ನೇಮಕ ಗೊಳ್ಳಲಿದ್ದಾರೆ.

ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ ಅಸ್ತಿತ್ವಕ್ಕೆ ಬಂದು ಹಲವು ದಶಕಗಳು ಉರುಳಿದ ಬಳಿಕ ಮಹಾನಗರ ಪಾಲಿಕೆಗಳ ನೌಕರರಿಗೆ ಪ್ರತ್ಯೇಕ ನೇಮಕಾತಿಯ ಸಾಮಾನ್ಯ ನಿಯಮವನ್ನು ಜಾರಿಗೆ ತರ ಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಸಚಿವಾಲಯ 2009ರಲ್ಲಿ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಕಾನೂನಿನಲ್ಲಿರುವ ಲೋಪದೋಷ ಗಳನ್ನು ಸರಿಪಡಿಸಲು ಸರ್ಕಾರಕ್ಕೆ ಸೂಚಿಸುವಂತೆ ರಾಜ್ಯ ಮಹಾನಗರ ಪಾಲಿಕೆ ನೌಕರರ ಪರಿಷತ್ 2010ರಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಂಡಿದ್ದು, ನೂತನ ನಿಯಮದ ಸಮರ್ಪಕ ಜಾರಿಗೆ ಸರ್ಕಾರ ಚಾಲನೆ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಗಳಿಗೂ ನೂತನ ಕಾನೂನು ಅನ್ವಯಿಸಲಿದೆ. ಜನ ಸಂಖ್ಯೆಯ ಆಧಾರದ ಮೇಲೆ ನಾಲ್ಕು ವರ್ಗಗಳನ್ನಾಗಿ ವಿಂಗಡಿಸಲಾಗಿದ್ದು, 12 ಲಕ್ಷಕ್ಕಿಂತ ಹೆಚ್ಚು ನಿವಾಸಿ ಗಳಿರುವ ಪಾಲಿಕೆಯನ್ನು `ಎ' ವರ್ಗ ಎಂದು ಗುರುತಿಸ ಲಾಗಿದೆ. ಮೈಸೂರು ಮತ್ತು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಳು 9 ರಿಂದ 12 ಲಕ್ಷ ಜನಸಂಖ್ಯೆ ಹೊಂದಿದ್ದು `ಬಿ' ವರ್ಗಕ್ಕೆ ಸೇರಿವೆ. ಉಳಿದ ಎಲ್ಲ ಮಹಾನಗರ ಪಾಲಿಕೆಗಳ ಜನಸಂಖ್ಯೆ 3 ರಿಂದ 6 ಲಕ್ಷದ ಮಿತಿಯಲ್ಲಿದ್ದು, `ಡಿ' ವರ್ಗದಲ್ಲಿ ಪರಿಗಣಿಸ ಲಾಗಿದೆ.

ಪಾಲಿಕೆಯ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯುವ ಭರವಸೆಯನ್ನು ನೂತನ ಕಾನೂನು ಮೂಡಿಸಿದೆ. ಮೈಸೂರಿನ 9 ವಲಯಗಳಲ್ಲಿ ಸುಮಾರು 1,700 ನೌಕರರು ಕಾರ್ಯನಿರ್ವಹಿ ಸುತ್ತಿದ್ದು, 400ಕ್ಕೂ ಹೆಚ್ಚು ಹುದ್ದೆಗಳು ಬಹುದಿನ ಗಳಿಂದ ಖಾಲಿ ಉಳಿದಿವೆ. ಅನುಕಂಪದ ಆಧಾರದ ನೇಮಕಾತಿ ಹೊರತುಪಡಿಸಿ ನೂತನ ನೇಮಕಾತಿ ಸ್ಥಗಿತಗೊಂಡು ದಶಕಗಳೇ ಕಳೆದಿವೆ. ಆದರೆ ವೃಂದ ಮತ್ತು ನೇಮಕಾತಿಯ ಸಾಮಾನ್ಯ ನಿಯಮ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಾವಿರಕ್ಕೂ ಅಧಿಕ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿದೆ. ಪ್ರಮುಖವಾಗಿ, ಹೆಚ್ಚುವರಿ ಆಯುಕ್ತರ ಹುದ್ದೆಯನ್ನು ಪಾಲಿಕೆಗಳಿಗೆ ಇದೇ ಮೊದಲ ಬಾರಿಗೆ ನೀಡಲಾಗಿದೆ. ಹಿರಿಯ ಕೆಎಎಸ್ ಅಧಿಕಾರಿಯನ್ನು ಉಪ ಆಯುಕ್ತ ರಾಗಿ ನಿಯೋಜಿಸಲಿದೆ. ಕಂದಾಯ ಅಧಿಕಾರಿಯ ಹುದ್ದೆಗೆ ಉಪ ಆಯುಕ್ತ (ಕಂದಾಯ) ಎಂದು ಮರುನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.