ADVERTISEMENT

ಮೈಸೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 10:35 IST
Last Updated 24 ಫೆಬ್ರುವರಿ 2012, 10:35 IST

ಮೈಸೂರು: ಏಪ್ರಿಲ್‌ನಲ್ಲಿ ನಡೆಯಲಿರುವ ಮೈಸೂರು ವಿಶ್ವವಿದ್ಯಾನಿಲಯದ 92ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ, ನಗದು ಬಹುಮಾನ ಹಾಗೂ ಪಿಎಚ್‌ಡಿ ಪದವಿ ಪಡೆಯುವವರು ಈ ಬಾರಿ ಖಾದಿ ಉಡುಪಿನಲ್ಲಿ ಕಂಗೊಳಿಸಲಿದ್ದಾರೆ.

ಸಾಂಪ್ರದಾಯಿಕ ಗೌನು ಬಳಸದಿರಲು ನಿರ್ಧರಿಸಿರುವ ವಿ.ವಿ ಕಳೆದ ವರ್ಷವೇ ವಿದ್ಯಾರ್ಥಿಗಳಿಗೆ ಬಿಳಿಬಣ್ಣದ ಜುಬ್ಬಾ, ಪೈಜಾಮ ಹಾಗೂ ವಿದ್ಯಾರ್ಥಿನಿಯರು ಬಿಳಿಬಣ್ಣದ ಸೀರೆಯನ್ನು ಧರಿಸುವಂತೆ ಸೂಚಿಸಿತ್ತು. ಈ ಬಾರಿ ಕೊಂಚ ಬದಲಾವಣೆ ಮಾಡಲಾಗಿದ್ದು, ಘಟಿಕೋತ್ಸವ ಸಂದರ್ಭದಲ್ಲಿ ಖಾದಿ ಧಿರಿಸನ್ನು ಕಡ್ಡಾಯಗೊಳಿಸಿದೆ.

ಖಾದಿ ಮತ್ತು ಗ್ರಾಮೋದ್ಯೋಗ ನಿಗಮವು ಎಲ್ಲ ವಿದ್ಯಾರ್ಥಿಗಳಿಗೂ ಖಾದಿಬಟ್ಟೆ ಪೂರೈಸಲು ಮುಂದಾಗಿದ್ದು, ಫೆ. 28 ರಿಂದ ಬಟ್ಟೆ ವಿತರಣೆಯನ್ನು ಆರಂಭಿಸಲಿದೆ. ವಿದ್ಯಾರ್ಥಿಗಳಿಗೆ ಕಾಟನ್ ಖಾದಿ ಜುಬ್ಬಾ, ಪೈಜಾಮ, ಮೆರೂನ್ ಬಣ್ಣದ ಶಲ್ಯ ಹಾಗೂ ಖಾದಿ ವೇಸ್ ಕೋಟಿನ ಬಟ್ಟೆ ಹಾಗೂ ವಿದ್ಯಾರ್ಥಿನಿ ಯರಿಗೆ ಮೆರೂನ್ ಬಣ್ಣದ ಅಂಚು ಇರುವ ಕಾಟನ್ ಖಾದಿ ಸೀರೆ, ಕುಪ್ಪಸ ನೀಡಲಾಗುತ್ತದೆ.

ಧನ್ವಂತರಿ ರಸ್ತೆಯಲ್ಲಿರುವ ಹೊಳೆನರಸೀಪುರ ಖಾದಿ ಗ್ರಾಮೋದ್ಯೋಗ ಮಳಿಗೆ ಹಾಗೂ ಕುವೆಂಪುನಗರ ಎಂ ಬ್ಲಾಕ್‌ನಲ್ಲಿರುವ ಪಾಂಡು ಖಾದಿ ಭಂಡಾರಗಳಲ್ಲಿ ಈ ಬಟ್ಟೆಗಳು ದೊರೆಯಲಿವೆ. ಮಾರ್ಚ್ 3ರ ಒಳಗೆ ಬಟ್ಟೆ ಖರೀದಿಸುವವರಿಗೆ ನಿಗಮ ಶೇ.35ರಷ್ಟು ರಿಯಾಯಿತಿ ನೀಡುತ್ತಿದೆ.

ಮಾ. 3ರ ನಂತರ ಖರೀದಿಸುವವರು ಪೂರ್ಣ ಹಣ ಪಾವತಿಸಬೇಕು. ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು, ನಗದು ಬಹುಮಾನ ವಿಜೇತರು ಹಾಗೂ ಪಿಎಚ್‌ಡಿ ಪಡೆದಿರುವವರ ಜೊತೆ ಈ ಬಗ್ಗೆ ವಿವಿ ಈಗಾಗಲೇ ಚರ್ಚೆ ನಡೆಸಿದೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಖಾದಿ ಗ್ರಾಮೋದ್ಯೋಗ ನಿಗಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು, `ಧಾರವಾಡದ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಖಾದಿ ಬಟ್ಟೆ ನೀಡಲಾಗಿದ್ದು, ಪ್ರತಿ ಶನಿವಾರ ಅವರು ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸುತ್ತಿದ್ದಾರೆ.

ಅದೇ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಮೈಸೂರು ವಿ.ವಿ ಘಟಿಕೋತ್ಸವದಲ್ಲಿ ಚಿನ್ನದ ಪದಕ, ನಗದು ಬಹುಮಾನ ಹಾಗೂ ಪಿಎಚ್‌ಡಿ ಪಡೆಯುವವರಿಗೆ ಖಾದಿ ಜುಬ್ಬಾ, ಪೈಜಾಮ ಬಟ್ಟೆ ಹಾಗೂ ಸೀರೆಯನ್ನು ರಿಯಾಯಿತಿ ದರದಲ್ಲಿ ನೀಡಲು ತೀರ್ಮಾನಿಸಲಾಗಿದೆ~ ಎಂದು ತಿಳಿಸಿದರು.

286 ಚಿನ್ನದ ಪದಕ ವಿತರಣೆ

ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯಿಂದ ಮೈಸೂರು ವಿವಿಯೂ ಹೊರತಾಗಿಲ್ಲ. ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲು ಕಳೆದ 2-3 ವರ್ಷಗಳಿಂದ ವಿ.ವಿ ಸಾಕಷ್ಟು ಪರದಾಡುವಂತಾಗಿದೆ. 2 ವರ್ಷಗಳ ಹಿಂದೆಯೇ ಪದಕಗಳ ಬದಲು ನಗದು ಬಹುಮಾನ ನೀಡಬೇಕು ಎಂದು ತೀರ್ಮಾನಿಸಿ, ಅಂತಿಮವಾಗಿ ಕೈಬಿಟ್ಟಿತ್ತು. ಚಿನ್ನದ ಬೆಲೆ ಏರಿಕೆಯೇ ವಿ.ವಿ ಈ ನಿರ್ಧಾರ ತಳೆಯಲು ಕಾರಣವಾಗಿತ್ತು.

ಅದರಂತೆ, ಈ ಬಾರಿ ಏಪ್ರಿಲ್‌ನಲ್ಲಿ ನಡೆಯಲಿರುವ 92ನೇ ಘಟಿಕೋತ್ಸವದಲ್ಲಿ 286 ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ. ಒಂದು ಚಿನ್ನದ ಪದಕ ತಯಾರಿಸಲು ವಿ.ವಿಗೆ 2045 ರೂಪಾಯಿ ವೆಚ್ಚ ತಗುಲುತ್ತಿದ್ದು, 286 ಪದಕಗಳ ತಯಾರಿಕೆಗೆ ಒಟ್ಟು ರೂ. 5,84,870 ಲಕ್ಷವನ್ನು ವಿ.ವಿ ಖರ್ಚು ಮಾಡುತ್ತಿದೆ.

`ವಿ.ವಿಯಲ್ಲಿ ಚಿನ್ನದ ಪದಕವನ್ನು ನೀಡುವ ದಾನಿಗಳ ದತ್ತಿನಿಧಿಯನ್ನು ಕಳೆದ ವರ್ಷವೇ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಒಂದು ಪದಕ ತಯಾರಿಸಲು  ಕಳೆದ ವರ್ಷ ರೂ. 1600 ವೆಚ್ಚ ತಗುಲಿತ್ತು. ಈ ಬಾರಿ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಿಂದ ರೂ. 2045 ವೆಚ್ಚ ತಗುಲುತ್ತಿದೆ.
 
1 ಲಕ್ಷ ರೂಪಾಯಿಗೆ ವಾರ್ಷಿಕ 8 ಸಾವಿರ ರೂಪಾಯಿ ಬಡ್ಡಿ ಬರುತ್ತಿದ್ದು, ಆ ಹಣದಲ್ಲಿಯೇ ಪದಕ ನೀಡಲಾಗುತ್ತಿದೆ. ಕಡಿಮೆ ಬಡ್ಡಿ ಬರುವ ದತ್ತಿಗಳಿಗೂ ಈ ಹಣವನ್ನು ಬಳಸುವುದರಿಂದ ಪದಕ ನೀಡಲು ಯಾವುದೇ ಸಮಸ್ಯೆ ಎದುರಾಗಿಲ್ಲ~ ಎಂದು ಮೈಸೂರು ವಿ.ವಿ ಕುಲಸಚಿವ ಬಿ.ರಾಮು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.