ADVERTISEMENT

ರದ್ದಾದ ಸಂಘಕ್ಕೆ ಪಡಿತರ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 12:10 IST
Last Updated 28 ಜನವರಿ 2012, 12:10 IST
ರದ್ದಾದ ಸಂಘಕ್ಕೆ ಪಡಿತರ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ರದ್ದಾದ ಸಂಘಕ್ಕೆ ಪಡಿತರ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ   

ಮೈಸೂರು: ಮೈಸೂರು ತಾಲ್ಲೂಕು ಬೋಗಾದಿಯಲ್ಲಿ 1993-94ರಲ್ಲಿ ಆರಂಭಗೊಂಡು, 2005 ರಿಂದ ರದ್ದಾಗಿರುವ ಶ್ರೀಬೋಗೇಶ್ವರ ಬಳಕೆದಾರರ ಸಹಕಾರ ಸಂಘಕ್ಕೆ ಅಕ್ರಮವಾಗಿ ಪಡಿತರ ಸರಬರಾಜು ಮಾಡಲಾಗುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಬೋಗಾದಿ ಗ್ರಾ.ಪಂ. ಸದಸ್ಯ ಹಾಲಿನ ಪುಟ್ಟೇಗೌಡ ಹಾಗೂ ಇತರರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘವು ಸಹಕಾರಿ ಇಲಾಖೆ ಗುಂಪು ಆದೇಶ ಸಂಖ್ಯೆ ಡಿಬಿಎಂಬಿ4 ಪ್ರಕಾರ ನಿಯಮಗಳನ್ನು ಪಾಲಿಸದೇ ಇದ್ದರಿಂದ 2008ರ ಮಾರ್ಚ್ 31ರಂದು ರದ್ದುಗೊಂಡಿದೆ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಶಾಮೀಲಾಗಿ ಇದುವರೆಗೂ ಪಡಿತರವನ್ನು ಸರಬರಾಜು ಮಾಡುತ್ತ ಬಂದಿದ್ದಾರೆ. ಸಂಘ ಸ್ಥಗಿತಗೊಂಡಿರುವ ಮಾಹಿತಿ ಷೇರುದಾರರಿಗೆ ತಿಳಿದಿಲ್ಲ.
 
ಈ ಬಗ್ಗೆ ಸಹಕಾರ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದಾಗ, ಜಂಟಿ ನಿಬಂಧಕರು ಸಂಘ ಅಸ್ತಿತ್ವದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕೂಡಲೇ ಪಡಿತರ ಸರಬರಾಜನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮವಾಗಿ ಪಡಿತರ ಸರಬರಾಜು ಆಗುತ್ತಿರುವ ಬಗ್ಗೆ ತಹಶೀಲ್ದಾರ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ ದಿವಾಕರ್ ಅವರಿಗೆ ಎಲ್ಲ ದಾಖಲಾತಿಗಳನ್ನು ಸಲ್ಲಿಸಲಾಗಿದೆ. ಆದರೆ, ಕ್ರಮಕ್ಕೆ ಮುಂದಾಗಬೇಕಾದ ಅಧಿಕಾರಿಗಳು ರದ್ದಾಗಿರುವ ಸಂಘಕ್ಕೆ ಪಡಿತರ ಸರಬರಾಜು ಮಾಡಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ದೂರಿದರು.

ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ, ಜೆಡಿಎಸ್ ಹಾಗೂ ಬೋಗಾದಿ ಗ್ರಾಮದ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.