ADVERTISEMENT

ರಷ್ಯನ್ ಕಥೆಗಳು ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 6:35 IST
Last Updated 4 ಫೆಬ್ರುವರಿ 2012, 6:35 IST

ಮೈಸೂರು:ಉಪನ್ಯಾಸಕ ಕನ್ನಂಬಾಡಿ ಶಿವಶಂಕರ ಅವರ `ರಷ್ಯನ್ ಕಥೆಗಳು~ ಪುಸ್ತಕವನ್ನು ಮಹಾರಾಜ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ.ನಾಗಣ್ಣ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, `ಈ ಹಿಂದೆ ಬಿಡಿ ಬಿಡಿಯಾಗಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆಗಳನ್ನು ಶಿವಶಂಕರ ಅವರು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಕನ್ನಡದ ಮುಖ್ಯ ವಾಹಿನಿಗೆ ಮೂರ‌್ನಾಲ್ಕು ದಶಕಗಳ ಹಿಂದೆಯೇ ರಷ್ಯನ್ ಕಥೆಗಳು ಬಂದಿವೆ. ಲಿಯೋ ಟಾಲ್‌ಸ್ಟಾಯ್ ಅವರ `ಯುದ್ಧ ಮತ್ತು ಶಾಂತಿ~ ಕೃತಿಯನ್ನು ನಾಡೋಜ ಡಾ.ದೇಜಗೌ ಹೊರತಂದಿದ್ದಾರೆ.

ಅದೇ ರೀತಿ ಓ.ಎಲ್.ನಾಗಭೂಷಣಸ್ವಾಮಿ `ವಾರ್ ಅಂಡ್ ಪೀಸ್~ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ ಮುಂದುವರಿದ ಭಾಗವಾಗಿ ಶಿವಶಂಕರ ಅವರು ರಷ್ಯನ್ ಕಥೆಗಳನ್ನು ಕನ್ನಡ ಮುಖ್ಯವಾಹಿನಿ ಓದುಗರಿಗೆ ಕಟ್ಟಿ ಕೊಟ್ಟಿದ್ದಾರೆ~ ಎಂದರು.

`ಅನುವಾದ ಸಾಹಿತ್ಯದಲ್ಲಿ ಇಂದು ಸಾಕಷ್ಟು ಅವಕಾ ಶಗಳು ಲಭ್ಯ ಇವೆ. ಅನುವಾದಕರಿಗೆ ಕೈತುಂಬ ಹಣ ಸಿಗುತ್ತಿದೆ. `ವಾರ್ ಅಂಡ್ ಪೀಸ್~ ಕೃತಿಯ ಅನುವಾ ದಕ್ಕೆ ಓ.ಎಲ್.ನಾಗಭೂಷಣಸ್ವಾಮಿ ರೂ. 1.30 ಲಕ್ಷ ಗೌರವಧನ ಪಡೆದಿರುವುದೇ ಇದಕ್ಕೆ ಸಾಕ್ಷಿ. ಬಹುಷಃ ಇಷ್ಟು ದೊಡ್ಡ ಮೊತ್ತವನ್ನು ಕನ್ನಡದ ಬೇರೆ ಯಾವ ಅನುವಾದಕರೂ ಪಡೆದಿಲ್ಲ~ ಎಂದರು.

`ಶಿವಶಂಕರ ಅವರು ಚಕಾಫ್, ಅಲೆಗ್ಸಾಂಡರ್ ಪುಸ್ಕಿನ್, ಲಿಯೋ ಟಾಲ್‌ಸ್ಟಾಯ್, ಇವಾನ್ ಟರ್ಕಿನ್ ಹಾಗೂ ದಾಸ್ತೋವಿಸ್ಕಿ ಅವರ ಎಂಟು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಷ್ಯ ಭೌಗೋಳಿಕವಾಗಿ ಭಾರತಕ್ಕೆ ಹತ್ತಿರ. ಜನ ಜೀವನವೂ ಭಾರತದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಆದ್ದ ರಿಂದ ಎಲ್ಲ ಕಥೆಗಳೂ ನಮ್ಮವೇ ಎಂಬಷ್ಟು ಹತ್ತಿರ ವಾಗಿದ್ದು, ಓದಿಸಿಕೊಂಡು ಹೋಗುತ್ತವೆ~ ಎಂದರು.

ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, `ರಷ್ಯನ್ ಕಥೆಗಳು ನಮ್ಮದೇ ಬದುಕಿನ ಕಥೆಗಳಾಗಿವೆ ಮತ್ತು ವಿಶ್ವಮಾನ್ಯತೆ ಪಡೆದಿವೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಹಿತ್ಯ ಓದುವ ಆಸಕ್ತಿ ಬೆಳೆಸಿಕೊಳ್ಳ ಬೇಕು. ಸಾಹಿತ್ಯ ಓದಿನಿಂದ ಭಾಷೆ ಅಭಿವೃದ್ಧಿಯಾಗು ತ್ತದೆ. ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ~ ಎಂದು ತಿಳಿಸಿದರು.

ಮಹಾರಾಜ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ನಾಗರಾಜು, ಕವಿ ಎಸ್. ಮಂಜುನಾಥ್, ಜಾನಪದ ವಿದ್ವಾಂಸ ಡಾ.ಎಂ.ಭೈರೇಗೌಡ, ನೆಲಮಲೆ ಪಬ್ಲಿಷಿಂಗ್ ಹೌಸ್‌ನ ನಂದೀಶ್ ನೆಲಮಲೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.