ADVERTISEMENT

ರಾಮೋತ್ಸವ: ಎಲ್ಲೆಡೆ ರಾಮ ನಾಮ ಜಪ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 8:40 IST
Last Updated 2 ಏಪ್ರಿಲ್ 2012, 8:40 IST

ಮೈಸೂರು: ನಗರದ ವಿವಿಧ ಬಡಾವಣೆಗಳಲ್ಲಿ ಭಾನುವಾರ ರಾಮ ನವಮಿಯನ್ನು ಜನರು ಸಂಭ್ರಮದಿಂದ ಆಚರಿಸಿದರು. ರಾಮ ಮಂದಿರ ಅಷ್ಟೇ ಅಲ್ಲದೆ ಇತರೆ ದೇವಾಲಯ, ಸಾರ್ವಜನಿಕ ಸ್ಥಳಗಳಲ್ಲೂ ಜನರು ರಾಮನಾಮ ಜಪಿಸಿದರು.

ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರ, ಕೋಟೆ ಆಂಜನೇಯಸ್ವಾಮಿ, ಅಗ್ರಹಾರದ ಮಾರುತಿ ದೇವಾಲಯ, ವೆಂಕಟೇಶ್ವರಸ್ವಾಮಿ ದೇವಾಲಯ, ಸುಬ್ಬರಾಯನ ಕೆರೆ ಬಳಿ ಇರುವ ರಾಘವೇಂದ್ರ ಸ್ವಾಮಿ ಬೃಂದಾವನ ಸನ್ನಿಧಾನ, ಗಣಪತಿ ಸಚ್ಚಿದಾನಂದ ಆಶ್ರಮ ಸೇರಿದಂತೆ ವಿವಿಧೆಡೆ ಭಕ್ತಿಯಿಂದ ರಾಮ ನವಮಿ ಆಚರಿಸಲಾಯಿತು.

ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ 83ನೇ ವರ್ಷದ ಶ್ರೀರಾಮೋತ್ಸವವನ್ನು ಸಡಗರ ದಿಂದ ಆಚರಿಸ ಲಾಯಿತು. ಬೆಳಿಗ್ಗೆ 11 ಗಂಟೆಗೆ ಶ್ರೀರಾಮ ಪಟ್ಟಾಭಿಷೇಕ ಮಾಡಲಾಯಿತು. ಅಲ್ಲದೇ ವಿಷ್ಣುಸಹಸ್ರ ನಾಮ ಪಾರಾಯಣ ಮಾಡಲಾಯಿತು. ಮಧ್ಯಾಹ್ನ ಎಲ್ಲ ಭಕ್ತಾದಿ ಗಳಿಗೂ ಪ್ರಸಾದ, ಮಜ್ಜಿಗೆ, ಪಾನಕ ವಿತರಿಸಲಾಯಿತು.
ಉದಯಗಿರಿಯ ಮಹಾಜನ ಸಭಾವತಿಯಿಂದ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಮಹಾಗಣ ಪತಿ ಹೋಮ, ಮೃತ್ಯುಂಜಯ ಹಾಗೂ ರಾಮತಾರಕ ಹೋಮ, ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.

ಜೆ.ಪಿ.ನಗರದ ಶ್ರೀರಾಮ ಭಕ್ತವೃಂದ ಸೇವಾ ಟ್ರಸ್ಟ್, ಎನ್.ಆರ್.ಮೊಹಲ್ಲಾದ ಅಂಬಾಭವಾನಿ ದೇವಸ್ಥಾನ ಭಕ್ತ ಮಂಡಳಿ, ಸಿಎಫ್‌ಟಿಆರ್‌ಐ ಬಡಾವಣೆಯ ವಿಪ್ರ ಬಳಗ, ಹನುಮಾನ್ ಗಡಿ ಸೇವಾ ಸಮಿತಿ, ಶ್ರೀಶಂಕರ ಜಯಂತಿ ಸಭಾ, ಶ್ರೀರಾಮಾಭ್ಯುದಯ ಸಭಾ, ಶ್ರೀಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾ, ನಾರಾಯಣಶಾಸ್ತ್ರಿ ರಸ್ತೆಯ ಶ್ರೀಪ್ರಸನ್ನ ಸೀತಾರಾಮ ಮಂದಿರ, ಜಯಲಕ್ಷ್ಮೀಪುರಂನ ಶ್ರೀರಾಮ ಸೇವಾ ಮಂಡಳಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಮ ನವಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ಸಂಘಟನೆಗಳು, ಆಟೋ ಚಾಲಕರ ಸಂಘದವರು ರಾಮನನ್ನು ಪೂಜಿಸಿ ಭಜನೆಯ ಮೂಲಕ ರಾಮನಾಮ ಜಪಿಸಿದರು. ವಿವಿಧ ಬಡಾವಣೆಯ ಮುಖ್ಯ ವೃತ್ತಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಬಿಸಿಲಿನಿಂದ ಬಾಯಾರಿದ ಜನರು ಭಕ್ತರು ನೀಡುವ ಪಾನಕ ಹಾಗೂ ಮಜ್ಜಿಗೆಯನ್ನು ಕುಡಿದು ದಾಹ ತಣಿಸಿಕೊಂಡರು. ಅಲ್ಲದೇ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರರು, ಆಟೋ ಚಾಲಕರು, ಬಸ್ಸು ಹಾಗೂ ಲಾರಿ ಚಾಲಕರು ಕೂಡ ಮಜ್ಜಿಗೆ, ಪಾನಕ ಕುಡಿದರು. ದೇವರಾಜ ಮೊಹಲ್ಲಾ, ದಿವಾನ್ಸ್ ರಸ್ತೆ, ಒಂಟಿಕೊಪ್ಪಲು, ಕನ್ನೇಗೌಡನಕೊಪ್ಪಲು, ಅಗ್ರಹಾರ ವೃತ್ತ, ದೇವರಾಜ ಅರಸ್ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಪೆಂಡಾಲ್ ನಿರ್ಮಿಸಿ ಪಾನಕ, ಮಜ್ಜಿಗೆ ವಿತರಿಸಲಾಯಿತು.

ಸಂಗೀತ ಕಾರ್ಯಕ್ರಮ: ವಿದುಷಿ ಕುಸುಮ ವಿ.ಚಲಾ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ, ಭವಾನಿ ಭಕ್ತ ಮಂಡಳಿ ಸದಸ್ಯರಿಂದ ಭಕ್ತಿಗೀತೆಗಳ ಕಾರ್ಯಕ್ರಮ, ರೇಖಾ ವೆಂಕಟೇಶ್ ಮತ್ತು ತಂಡ ದಿಂದ ಭಕ್ತಿಗೀತೆ, ಕೆ.ಎನ್.ಶಾರದಾಂಬ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ವಿದ್ವಾನ್ ಭರತ್‌ಸುಂದರ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ವಿದ್ವಾನ್ ಸಾಕೇತ್ ರಾಮನ್ ಅವರಿಂದ ಗಾಯನ ಕಾರ್ಯಕ್ರಮ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.