ADVERTISEMENT

ರಿಯಾಯಿತಿ ದರದಲ್ಲಿ ಬಿತ್ತನೆ ಮೀನುಮರಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 6:20 IST
Last Updated 7 ಫೆಬ್ರುವರಿ 2012, 6:20 IST

ಮೈಸೂರು: ಮೀನು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಬಿತ್ತನೆ ಮೀನು ಮರಿಗಳನ್ನು ಶೇ 50 ರಿಯಾಯಿತಿ ದರದಲ್ಲಿ ಮೀನುಗಾರಿಕೆ ಇಲಾಖೆ ಮಾರಾಟ ಮಾಡುತ್ತಿದೆ. ಮೀನು ಕೃಷಿಯಿಂದ ಸ್ವ-ಉದ್ಯೋಗ ಕಂಡುಕೊಳ್ಳುವ ಜೊತೆಗೆ ಲಾಭ ಸಹ ಗಳಿಸಬಹುದು ಎಂಬುದರ ಬಗ್ಗೆ ಇಲಾಖೆ ಅರಿವು ಮೂಡಿಸುತ್ತಿದೆ.

ಮೀನು ಕೃಷಿಯಲ್ಲಿ ತೊಡಗಿಸಿಕೊಂಡವರು ಈಗಾಗಲೇ ಲಾಭದ ಮುಖ ನೋಡಿದ್ದಾರೆ. ಯುವ ಜನಾಂಗವನ್ನು ಮೀನು ಕೃಷಿಯತ್ತ ಸೆಳೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನುಗಾರಿಕೆ ಇಲಾಖೆ ತರಬೇತಿ ಮತ್ತು ಅರಿವು ಕಾರ್ಯಕ್ರಮವನ್ನು ನಡೆಸುವ ಮೂಲಕ ಮೀನು ಕೃಷಿ ಉದ್ಯಮವನ್ನು ಪ್ರಚುರಪಡಿಸುವುದರಲ್ಲಿ ನಿರತವಾಗಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತಂದುಕೊಡುವ ಉತ್ತಮ ತಳಿಯ ಮೀನು ಮರಿಗಳನ್ನು ಇಲಾಖೆ ಮಾರಾಟ ಮಾಡುತ್ತಿದೆ. ಕಾಟ್ಲಾ, ರೋಹು, ಮೃಗಾಲ್, ಬೆಳ್ಳಿಗೆಂಡೆ, ಹುಲ್ಲುಗೆಂಡೆ, ಸಾಮಾನ್ಯ ಗೆಂಡೆ ತಳಿಯ ಮೀನುಮರಿಗಳು ಮಾರಾಟ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ದೊರಕುತ್ತಿವೆ.

ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಕೈಗಾರಿಕಾ ಪ್ರದೇಶ ಮತ್ತು ನುಗು ಮೀನುಮರಿ ಪಾಲನಾ ಕೇಂದ್ರ, ಬಿದರಹಳ್ಳಿ ಉತ್ಪಾದನಾ ಕೇಂದ್ರ, ಆಲನಹಳ್ಳಿ ಫಿಶ್‌ಸೀಡ್ ಫಾರಂ, ಕಪಿಲಾ ಫಿಶ್‌ಸೀಡ್ ಫಾರಂ, ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಕೃಷಿಕರು ಬಿತ್ತನೆ ಮೀನುಮರಿಗಳನ್ನು ಖರೀದಿ ಮಾಡಬಹುದು. ಸಾಕಿದ ಮೀನುಗಳು ಬೆಳೆದ ಮೇಲೆ ಇಲಾಖೆಗೆ ಮಾರಾಟ ಮಾಡಬೇಕೆಂದೇನಿಲ್ಲ.
ಹೆಚ್ಚು ಲಾಭ ನೀಡುವ ಖಾಸಗಿ ಮೀನು ಮಾರಾಟ ಕೇಂದ್ರಗಳಿಗೂ ಕೃಷಿಕರು ಮೀನುಗಳನ್ನು ಮಾರಾಟ ಮಾಡಬಹುದು.

ಮೀನು ಕೃಷಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಸಹಾಯಧನ ಸಹ ನೀಡುತ್ತಿದೆ. ವಿವಿಧ ಯೋಜನೆಗಳಲ್ಲಿ ಎಕರೆಯೊಂದಕ್ಕೆ ಕನಿಷ್ಠ ರೂ.10 ಸಾವಿರದಿಂದ ಗರಿಷ್ಠ ರೂ.30 ಸಾವಿರ ಸಹಾಯಧನ ನೀಡಲಾಗುತ್ತಿದೆ. ಬ್ಯಾಂಕ್‌ನಿಂದ ಸಾಲ ಒದಗಿಸಲು ಮೀನುಗಾರಿಕೆ ಇಲಾಖೆ ಸಹಾಯ ಹಸ್ತ ಚಾಚಿದೆ.
 
ಒಂದು ಎಕರೆ ಪ್ರದೇಶದಲ್ಲಿ ಕೊಳದಲ್ಲಿ ಮೀನು ಕೃಷಿ ಆರಂಭಿಸಲು ಅಂದಾಜು ರೂ.54 ಸಾವಿರ ಇದ್ದರೆ ಸಾಕು. 2,500 ಮೀನುಮರಿಗಳನ್ನು ಸಾಕಿದಲ್ಲಿ ಕೆಜಿಗೆ ರೂ.18 ರ ದರದಲ್ಲಿ ನಿವ್ವಳ ಲಾಭ ರೂ.26 ಸಾವಿರ ಗಳಿಸಬಹುದು ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

`ಮೀನುಕೃಷಿ ಉತ್ತಮ ಲಾಭ ತಂದುಕೊಡುವ ಕಸುಬು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಇಲಾಖೆ ವತಿಯಿಂದ ಗ್ರಾ.ಪಂ. ಮಟ್ಟದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೀನು ಕೃಷಿಗೆ ಸರ್ಕಾರ ಸಹಾಯಧನ ನೀಡಲಿದೆ. ಅಲ್ಲದೆ ಬಿತ್ತನೆ ಮೀನು ಮರಿಗಳ ಮೇಲೆ ಇಲಾಖೆ ಶೇ 50 ರಷ್ಟು ರಿಯಾಯಿತಿ ನೀಡುತ್ತಿದೆ. ಸ್ವ ಉದ್ಯೋಗ ಸೃಷ್ಟಿಸಿಕೊಡುವ ಮೀನು ಕೃಷಿ ಹೊಸ ತಲೆಮಾರನ್ನು ಆಕರ್ಷಿಸುತ್ತಿದೆ~ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭವಾನಿ ತಿಳಿಸಿದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ನಂ.1226/1, `ಭಾವಸಂಪದ~ ಕಾಂತರಾಜ ಅರಸ್ ರಸ್ತೆ, ಕೃಷ್ಣಮೂರ್ತಿಪುರಂ ದೂ: 2423535 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.