ADVERTISEMENT

‘ರೆಸಾರ್ಟ್‌ ರಾಜಕೀಯ ಪ್ರಜಾಪ‍್ರಭುತ್ವದ ವಿಕೃತಿ’

ಸರ್ವಪಕ್ಷಗಳ ಸರ್ಕಾರ ರಚನೆ–ವಿಶ್ವೇಶತೀರ್ಥ ಸ್ವಾಮೀಜಿ ಒಲವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 7:27 IST
Last Updated 6 ಜೂನ್ 2018, 7:27 IST

ಮೈಸೂರು: ‘ಆಪರೇಷನ್‌ , ರೆಸಾರ್ಟ್‌ ರಾಜಕೀಯ ಪ್ರಜಾಪ‍್ರಭುತ್ವದ ದೊಡ್ಡ ವಿಕೃತಿ. ಬಹುಮತ ಇಲ್ಲದಿದ್ದಾಗ ಸರ್ವಪಕ್ಷಗಳ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಆಗ ಯಾವುದೇ ಅಸ್ಥಿರತೆ ಭಯ ಇರುವುದಿಲ್ಲ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳು ಸೇರಿ ಸರ್ಕಾರ ರಚಿಸಿದರೆ ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಆಪರೇಷನ್‌, ರೆಸಾರ್ಟ್‌ ರಾಜಕೀಯದ ಆತಂಕ ಇರುವುದಿಲ್ಲ’ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನರೇಂದ್ರ ಮೋದಿ ಸರ್ಕಾರಕ್ಕೆ ಇನ್ನೂ ಒಂದು ವರ್ಷದ ಕಾಲಾವಕಾಶ ಇದೆ. ಈ ಅವಧಿಯಲ್ಲಿ ವಿದೇಶದಿಂದ ಕಪ್ಪುಹಣ ತರುವ, ಗಂಗಾ ನದಿ ಶುದ್ಧೀಕರಣದ ಕೆಲಸ ನಡೆದು ದೇಶಕ್ಕೆ ಒಳ್ಳೆಯದಾಗಬೇಕು. ಈ ಉದ್ದೇಶದಿಂದ ಸಲಹೆ ನೀಡಿದ್ದೇನೆ ಅಷ್ಟೇ. ನನಗೆ ರಾಷ್ಟ್ರದ ಹಿತ ಮುಖ್ಯ’ ಎಂದರು.

ADVERTISEMENT

‘ಕೆ.ಎಸ್‌.ಈಶ್ವರಪ್ಪ ಅವರ ಮನೆಗೆ ಹೋಗಿದ್ದೆ. ಗಂಗಾ ನದಿ ಬಳಿಗೆ ಕರೆದುಕೊಂಡು ಹೋಗುವುದಾಗಿ ಆಗ ಹೇಳಿದರು. ಆದರೆ, ನಾನು ಈಗಾಗಲೇ ಗಂಗಾ ನದಿಗೆ ಹೋಗಿ ಶುದ್ಧೀಕರಣದ ಬಗ್ಗೆ ವಿಚಾರಿಸಿದ್ದೇನೆ. ಕಾಶಿ ಜನರ ಅಭಿಪ್ರಾಯ ಕೇಳಿದ್ದೇನೆ. ನದಿಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬ ಉತ್ತರ ಬಂತು’ ಎಂದು ಹೇಳಿದರು.

‘ಈ ಎರಡು ವಿಚಾರ ಹೊರತುಪಡಿಸಿ ಮೋದಿ ಸರ್ಕಾರದಲ್ಲಿ ಉಳಿದೆಲ್ಲಾ ಕೆಲಸಗಳು ಚೆನ್ನಾಗಿಯೇ ನಡೆದಿವೆ. ಆರ್ಥಿಕತೆ ಸ್ಥಿರವಾಗಿದೆ. ಭ್ರಷ್ಟಾಚಾರ ತೊಡೆದು ಹಾಕಲು ಶ್ರಮಿಸುತ್ತಿದ್ದಾರೆ. ಕಟ್ಟುನಿಟ್ಟಾದ ನಿಯಮ ತಂದಿದ್ದಾರೆ. ನಾಲ್ಕು ವರ್ಷಗಳಿಂದ ಮೋದಿ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಶ್ಲಾಘಿಸಿದರು.

‘ನಾನು ಸ್ಪಷ್ಟೀಕರಣ ನೀಡಬೇಕು ಎಂದು ಯಾರೂ ಒತ್ತಾಯಿಸಿಲ್ಲ. ಪತ್ರಿಕೆಗಳನ್ನು ನೋಡಿ ಖುದ್ದಾಗಿ ಪತ್ರಿಕಾಗೋಷ್ಠಿ ಕರೆದಿದ್ದೇನೆ’ ಎಂದರು. ‘ರಾಮ ಮಂದಿರಕ್ಕೆ ಹಲವು ತೊಡಕುಗಳು ಇರುವುದರಿಂದ ಆ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಇದೊಂದು ಕ್ಲಿಷ್ಟಕರ ವಿಚಾರ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ‌’ ಎಂದು ನುಡಿದರು.

‘ಯಾವುದೇ ಸರ್ಕಾರ ಐದು ವರ್ಷ ಪೂರೈಸಬೇಕು. ಗಲಾಟೆ ನಡೆಯಬಾರದು. ಗಲಾಟೆ ನಡೆದರೆ ಆಡಳಿತ ನಿಂತು ಹೋಗುತ್ತದೆ’ ಎಂದು ಹೇಳಿದರು.

60 ವಸಂತಗಳ ಸಂಭ್ರಮ: ಅಖಿಲ ಭಾರತ ಮಾಧ್ವ ಮಹಾ ಮಂಡಲ, ಮಾಧ್ವ ವಿದ್ಯಾರ್ಥಿ ನಿಲಯದ 60 ವಸಂತಗಳ ಸಂಭ್ರಮಕ್ಕೆ ಚಾಲನೆ ನೀಡಿ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿದರು.

ಸಮುದಾಯದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಕೆಲವರು ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಗೆ ದೇಣಿಗೆ ನೀಡಿದರು.

ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ವಿದ್ವಾನ್ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಶಾಸಕ ಎಸ್‌.ಎ.ರಾಮದಾಸ್‌, ಅಖಿಲ ಭಾರತ ಮಾಧ್ವ ಮಹಾ ಮಂಡಲದ ಅಧ್ಯಕ್ಷ ಎಂ.ಆರ್.ಪುರಾಣಿಕ್, ಉಪಾಧ್ಯಕ್ಷ ಕೆ.ವಿ.ಶ್ರೀಧರ, ಕಾರ್ಯದರ್ಶಿ ಪಿ.ಜಿ.ಪ್ರವೀಣ, ಖಜಾಂಚಿ ಪಿ.ವಿ.ನಾಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.