ADVERTISEMENT

ವನ್ಯಜೀವಿಗಳಿಂದ ರಕ್ಷಣೆಗೆ ಜ್ಞಾನ-ಜಾಣ್ಮೆ ಆಗತ್ಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 8:10 IST
Last Updated 11 ಏಪ್ರಿಲ್ 2011, 8:10 IST

ಮೈಸೂರು: ಕಾಡಿನಲ್ಲಿ ಹುಲಿ, ಸಿಂಹ, ಆನೆ, ಕರಡಿ ಇರುತ್ತವೆ, ಅವು ನಿಮಗೆ ಏನು ಮಾಡಲ್ವಾ..? ಪ್ರಾಣಿಗಳಿಗೆ ನೀವು ಹೆದರಲ್ವಾ..?-ಹೀಗೆ   ಚಿಣ್ಣರು ಪ್ರಶ್ನೆಗಳನ್ನು ಕೇಳುತ್ತಿದ್ದದ್ದು ಕಲಾ ಸುರುಚಿ ವತಿಯಿಂದ ಸುರುಚಿ ರಂಗಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ‘ವೈಲ್ಡ್ ಡಾಗ್ ಡೈರೀಸ್’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಪಾಲ್ಗೊಂಡಿದ್ದ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ ಅವರಿಗೆ.

ಎಳೆಯರು, ಸಾಕ್ಷ್ಯಚಿತ್ರ ವೀಕ್ಷಿಸಿದವರ ಪ್ರಶ್ನೆಗಳಿಗೆ ಉತ್ತರಿಸಿದ ಕೃಪಾಕರ-ಸೇನಾನಿ, ಜ್ಞಾನ ಮತ್ತು ಜಾಣ್ಮೆಯಿದ್ದರೆ ಮನುಷ್ಯರು ಕಾಡಿನಲ್ಲಿ ಮೃಗಗಳ ಅಪಾಯಗಳಿಂದ ಸುಲಭವಾಗಿ ಪಾರಾಗಬಹುದು ಎಂದು ತಿಳಿಸಿ, ‘ವೈಲ್ಡ್ ಡಾಗ್ ಡೈರೀಸ್’ ಸಾಕ್ಷ್ಯಚಿತ್ರ ನಿರ್ಮಾಣ ಕಥೆಯನ್ನು ಎಳೆ  ಎಳೆಯಾಗಿ ಬಿಚ್ಚಿಟ್ಟರು. ವನ್ಯಜೀವಿಗಳ ಚಿತ್ರ ಮಾಡುವವರು ಪ್ರಾಣಿಗಳ ಸಾಮಾಜಿಕ ಸಂರಚನೆ ಅಭ್ಯಸಿಸಬೇಕಾಗುತ್ತದೆ. ವನ್ಯಜೀವಿ ಛಾಯಾಗ್ರಾಹಕರಿಗೆ ತಾಳ್ಮೆ ಅಗತ್ಯ ಎಂದರು.

ಪ್ರತಿ ಪ್ರಾಣಿಗೂ ತನ್ನ ಸಂತತಿ ಅಳಿಯಬಾರದು ಎಂಬ ಆಸೆ ಇರುತ್ತದೆ. ಹೆಜ್ಜೆ ಸಪ್ಪಳ, ಕೂಗು, ಆಘ್ರಾಣ ಶಕ್ತಿ, ಅಪಾಯ ಮನ್ಸೂಚನೆ ಅರಿಯುವ ರೀತಿ, ಆಹಾರ ಪದ್ಧತಿ, ಸಂತಾನೋತ್ಪತ್ತಿ, ವರ್ತನೆ ಇತ್ಯಾದಿಗಳು ಪ್ರಾಣಿಯಿಂದ ಪ್ರಾಣಿಗೆ ಭಿನ್ನವಾಗಿರುತ್ತವೆ. ಕಾಡುಪ್ರಾಣಿಗಳ ಬಗ್ಗೆ ಚಿತ್ರ ಮಾಡುವಾಗ ಬುಡಕಟ್ಟು ಜನರ ಸಹಕಾರ ಬೇಕಾಗುತ್ತದೆ. ಅವರಿಗೆ ಪ್ರಾಣಿಗಳ ಚಲನವಲನ- ವೈರುಧ್ಯಗಳು ತಿಳಿದಿರುತ್ತದೆ ಎಂದರು.

ಏಷ್ಯಾದ ಕಾಡು ನಾಯಿಗಳ ಬಗ್ಗೆ ಯಾವುದೇ ಅಧ್ಯಯನಗಳು ಆಗಿಲ್ಲದಿದ್ದು ಮತ್ತು ಕಾಡುನಾಯಿಗಳ ನಡವಳಿಕೆ ಅಧ್ಯಯನ ಆಸಕ್ತಿ. ಇವು  ಈ ‘ವೈಲ್ಡ್ ಡಾಗ್ ಡೈರೀಸ್’ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಪ್ರೇರೇಪಣೆಯಾಯಿತು. ಈ ಸಾಕ್ಷ್ಯಚಿತ್ರವು ಕಾಡುನಾಯಿ (ಸೀಳುನಾಯಿ) ಸಂತಾ ನೋತ್ಪತ್ತಿ, ಬೇಟೆ ವಿಧಾನ, ಒಗ್ಗಟ್ಟು ಆಹಾರ ಪದ್ಧತಿ, ಚಿನ್ನಾಟ, ಚಲನವಲನಗಳನ್ನು ಸಮಗ್ರವಾಗಿ ತಿಳಿಸುತ್ತದೆ ಎಂದು ಹೇಳಿದರು.

ವೀರಪ್ಪನ್‌ನಿಂದ ಲಂಚ ಪಡೆದಗುಮಾಸ್ತ
ವೀರಪ್ಪನ್ ಸಹಚರನೊಬ್ಬ ಕಾಡಿನಲ್ಲಿ ಗಾಯಗೊಂಡಿದ್ದ. ಆಗ ವೀರಪ್ಪನ್ ಪೊಲೀಸ್ ಅಧಿಕಾರಿಯೊಬ್ಬರನ್ನು ಅಪಹರಿಸಿದ್ದ. ನಂತರ ಸಹಚರನಿಗೆ ಚಿಕಿತ್ಸೆ ಮತ್ತು ಹಣ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದ. ಸರ್ಕಾರ ಆ ಕಾಡಿನ ವ್ಯಾಪ್ತಿಗೆ ಬರುವ ಜಿಲ್ಲಾಧಿಕಾರಿಗೆ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದರು. ಆದೇಶದಂತೆ ಕಾರ್ಯಪ್ರವೃತಾದ ಜಿಲ್ಲಾಧಿಕಾರಿ ಮೊದಲಿಗೆ ವೀರಪ್ಪನ್ ಬಂಧಿಸಲು ರೂಪಿಸಿದ ಕಾರ್ಯತಂತ್ರ ವಿಫಲವಾಯಿತು. ನಂತರ ಅಪಹರಣ ಆಗಿರುವ ಅಧಿಕಾರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವೀರಪ್ಪನ್‌ಗೆ ಹಣ ತಲುಪಿಸಿ ಅಧಿಕಾರಿಯನ್ನು ಸುರಕ್ಷತವಾಗಿ ಕರೆತರಲು ಗುಮಾಸ್ತರೊಬ್ಬರ ಕೈಯಲ್ಲಿ ರೂ 3 ಲಕ್ಷ ಕಳುಹಿಸಿದ್ದರು. ದಂತಚೋರನನ್ನು ಸಂಧಿಸಿದ ಗುಮಾಸ್ತ ಅವನಿಗೆ  ಹಣ ತಲುಪಿಸಿ ಅಧಿಕಾರಿಯನ್ನು ಬಿಡಿಸಿದ್ದಾಯಿತು.

ಆದರೆ ಗುಮಾಸ್ತ ಮಾತ್ರ ಅಲ್ಲಿಂದ ಕದಲಲಿಲ್ಲ. ಆಗ ವೀರಪ್ಪನ್ ಕೆಲಸವಾಯಿತಲ್ಲ, ಹೋಗು ಮಾರಾಯಾ ಎಂದನಂತೆ. ಆಗ ಗುಮಾಸ್ತ ‘ಇದರಲ್ಲಿ ನನಗೆ ಏನೂ ಇಲ್ವಾ....’ ಎಂದಾಗ, ವೀರಪ್ಪನ್ ಆತನಿಗೆ ರೂ 10 ಸಾವಿರ  ಕೊಟ್ಟಿದ್ದನಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.