ವರುಣಾ: ವರಕೋಡು ವರುಣಾ ಹೋಬಳಿಯಲ್ಲಿ ಐತಿಹಾಸಿಕ ನೆಲೆಗಟ್ಟನ್ನು ಹೊಂದಿರುವ ಗ್ರಾಮ. ವರದನಾಯಕನಿಂದ ಸ್ಥಾಪಿತ ಗ್ರಾಮವಾದ್ದರಿಂದ
ಈ ಗ್ರಾಮಕ್ಕೆ ‘ವರಕೋಡು’ ಎಂಬ ಹೆಸರು ಬಂದಿದೆ. ‘ವರಕಾಡು’ ಎಂಬುದು ಗ್ರಾಮದ ಮತ್ತೊಂದು ಹೆಸರು.
ರಾಷ್ಟ್ರೀಯ ಹೆದ್ದಾರಿ ಮೂಲಕ ತಿ. ನರಸೀಪುರ ರಸ್ತೆಯಲ್ಲಿ ವರುಣಾದಿಂದ ಸುಮಾರು ಎರಡು ಕಿ.ಮೀ ಕ್ರಮಿಸಿದರೆ ಈ ಗ್ರಾಮ ಸಿಗುತ್ತದೆ. ಗ್ರಾಮದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ, ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಹದಗೆಟ್ಟ ರಸ್ತೆಗಳು: ಒಂದು ಮುಖ್ಯ ರಸ್ತೆ, ಹದಿನಾರು ಅಡ್ಡ ರಸ್ತೆಗಳನ್ನು ಹೊಂದಿರುವ ಗ್ರಾಮದಲ್ಲಿ ನಾಲ್ಕು ರಸ್ತೆ ಹೊರತುಪಡಿಸಿ, ಉಳಿದೆಲ್ಲ ರಸ್ತೆಗಳು ಹದಗೆಟ್ಟಿವೆ. ಬಹುತೇಕ ಚರಂಡಿಗಳು ಕೊಳೆತು ನಾರುತ್ತಿವೆ. ಪರಿಶಿಷ್ಟ ಜಾತಿಯವರು ವಾಸಿಸುವ ಕಾಲೊನಿಯ ರಸ್ತೆ ಹಾಗೂ ಚರಂಡಿಗಳು ಉತ್ತಮವಾಗಿವೆ.
ಬಸಿನೀರಿನ ಸಮಸ್ಯೆ: ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳಿಗೆ ಕೊರತೆ ಇಲ್ಲ. ಆದರೆ, ವಿದ್ಯುತ್ ಕಣ್ಣುಮುಚ್ಚಾಲೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ವರುಣಾ ನಾಲೆ ಗ್ರಾಮದ ಹೊರಭಾಗದಲ್ಲಿ ಹಾದು ಹೋಗಿದೆ. ದಂಡಿನದಾರಿ ರಸ್ತೆಯಲ್ಲಿ ನಾಲೆಯ ಬಸಿನೀರು ನಿಲ್ಲುತ್ತಿದೆ. ಇದು ಅನೇಕ ರೋಗಗಳು ಹರಡಲು ಕಾರಣವಾಗಿದೆ. ದಂಡಿನದಾರಿ ರಸ್ತೆ ನಿರ್ಮಾಣಕ್ಕೆ ₨ 5 ಲಕ್ಷ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ಆದರೆ, ರಸ್ತೆಯ ಪಕ್ಕದಲ್ಲಿ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಗ್ರಾಮದ ಗೃಹಿಣಿ ಪ್ರಭಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ಸಿಗದ ಅಸಮಾಧಾನ: ಗ್ರಾ.ಪಂ. ಪುನರ್ ವಿಂಗಡಣೆಯಲ್ಲಿ ಪಂಚಾಯಿತಿ ಕೇಂದ್ರ ಬಡಗಲಹುಂಡಿಗೆ ಹೋಗಿದೆ. ಈ ಕುರಿತು ಹಲವು ಪ್ರತಿಭಟನೆಗಳನ್ನು ನಡೆಸಿರುವ ಗ್ರಾಮಸ್ಥರಲ್ಲಿ ಅಸಮಾಧಾನವಿದ್ದು, ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಶೈಕ್ಷಣಿಕವಾಗಿ ಉತ್ತಮ ಸಾಧನೆ: ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶ ಪಡೆಯುತ್ತಿವೆ. ಅಲ್ಲದೆ, ವರಕೋಡು ಗ್ರಾಮದ ಮೊರಾರ್ಜಿ ವಸತಿ ಕಾಲೇಜು ಜಿಲ್ಲೆಯಲ್ಲಿ ಉತ್ತಮ ಹೆಸರು ಮಾಡಿದೆ.
ಆಸ್ಪತ್ರೆ ಇಲ್ಲ: ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲ. ಇದರಿಂದ ಬಡ ರೋಗಿಗಳಿಗೆ ತೀವ್ರ ಅನನುಕೂಲವಾಗಿದೆ. ತುರ್ತು ಸಮಯದಲ್ಲಿ ವರುಣಾ, ಹಾರೊಹಳ್ಳಿ ಅಥವಾ ಮೈಸೂರಿಗೆ ಹೊಗಬೇಕಾದ ಅನಿವಾರ್ಯತೆ ಇದೆ. ಪಶು ಆಸ್ಪತ್ರೆ ಕೂಡ ಇಲ್ಲದಿರುವುದರಿಂದ ಪಶುಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡುವಂತಾಗಿದೆ.
ಅಭಿವೃದ್ಧಿಗೆ ಅವಕಾಶ: ಮೈಸೂರು ನಗರದಿಂದ ವರಕೋಡು ಗ್ರಾಮಕ್ಕೆ ವಾಹನ ಸೌಕರ್ಯವಿದೆ. ಸಾಕಷ್ಟು ಸರ್ಕಾರಿ ಜಾಗವಿದ್ದು ಕಚೆೇರಿಗಳ ಸ್ಥಾಪನೆಗೆ ಅವಕಾಶವಿದೆ. ಗ್ರಾಮದ ವಾತಾವರಣ ಪಶುಪಾಲನೆಗೆ ಪೂರಕವಾಗಿದೆ. ಗ್ರಾಮದ ಸುಮಾರು ಐದನೂರು ಎಕರೆ ಜಮೀನು ನೀರಾವರಿ ಸೌಕರ್ಯ ಹೊಂದಿದೆ. ಭತ್ತ, ಕಬ್ಬು ಹಾಗೂ ರೇಷ್ಮೆ ಗ್ರಾಮದ ಪ್ರಮುಖ ಬೆಳೆಯಾಗಿವೆ.
ಐತಿಹಾಸಿಕ ವರದನಾಯಕನ ಕೊಳ ಹಾಗೂ ವರದರಾಜೇಶ್ವರ ದೇವಸ್ಥಾನ ಈ ಗ್ರಾಮದ ಪ್ರತಿಷ್ಠೆಯನ್ನು ಹೆಚ್ಚಿಸಿವೆ. ರಾಜಕೀಯ ಇಚ್ಛಾಶಕ್ತಿಯ ಸಹಕಾರ ಲಭಿಸಿದರೆ, ಈ ಗ್ರಾಮವನ್ನು ಮಾದರಿ ಗ್ರಾಮವಾಗುವುದರಲ್ಲಿ ಅನುಮಾನವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.