ADVERTISEMENT

ವರ್ಣರಂಜಿತ ಆಂಜನೇಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 9:15 IST
Last Updated 17 ಜನವರಿ 2012, 9:15 IST

ಹುಣಸೂರು: ತಾಲ್ಲೂಕಿನ ದೊಡ್ಡಹೆಜ್ಜೂರು ಆಂಜನೇಯಸ್ವಾಮಿ ರಥೋತ್ಸವ ಸೋಮವಾರ ಮಧ್ಯಾಹ್ನ ಅದ್ಧೂರಿಯಾಗಿ ನಡೆಯಿತು.

ರಥೋತ್ಸವಕ್ಕೂ ಮುನ್ನ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಉತ್ಸವಮೂರ್ತಿಯನ್ನು ಹೊತ್ತು ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಸುತ್ತಿ ಪ್ರದಕ್ಷಿಣೆ ಹಾಕಿ ನಂತರ ತೇಗದ ಮರದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳು ಜವನ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಮೆರೆದರು.

ರಥೋತ್ಸವ ವೇಳೆ ಹೆಚ್ಚಾಗಿ ನವದಂಪತಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗಿರಿಜನ ನವದಂಪತಿ ಸಹ ಈ ಜಾತ್ರೆಯಲ್ಲಿ ಭಾಗವಹಿಸಿ ಹರಕೆ ಒಪ್ಪಿಸಿದರು.

ಹಲವರು ಕೆರೆಯಲ್ಲಿ ಸ್ನಾನ ಮಾಡಿ ದೇವಸ್ಥಾನದ ಸುತ್ತಲು ಉರುಳು ಸೇವೆಯಲ್ಲಿ ಮಾಡಿದರು. ದಾಸಯ್ಯನವರು ಆಂಜನೇಯ ದೇವಸ್ಥಾನದ ಸುತ್ತಲೂ ಬಾಳೆಹಣ್ಣು ಮತ್ತು ಬ್ಲ್ಲೆಲ ಬಲಿ ಹಾಕಿ ಕೋಲಾಟವಾಡುತ್ತಿದ್ದ ದೃಶ್ಯ ಆಕರ್ಷಕವಾಗಿತ್ತು.

ಉತ್ಸವದಲ್ಲಿ ಭಾಗವಹಿಸಿದ ವನಿತೆಯರು ಬಳೆ, ಬೆಂಡೋಲೆ ಅಂಗಡಿಗಳಿಗೆ ಮುಗಿಬಿದ್ದರು. ಮಕ್ಕಳು ಬಣ್ಣದ ನೀರು, ಐಸ್‌ಕ್ರೀಂ, ಕಲ್ಲಂಗಡಿ ಸವಿದರು. ವಾಡಿಕೆಯಂತೆ ಜಾತ್ರೆಗೆ ಬಂದವರು ಕಡ್ಲೆಪುರಿ, ಖಾರ ಮತ್ತು ಸಿಹಿ ತಿಂಡಿ ಖರೀದಿಸುವಲ್ಲಿ ನಿರತರಾಗಿದ್ದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯ ಎಸ್.ಚಿಕ್ಕಮಾದು, ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಎಪಿಎಂಸಿ ಆಧ್ಯಕ್ಷ ಕಿರಂಗೂರು ಬಸವರಾಜು, ತಾಲ್ಲೂಕು  ಪಂಚಾಯಿತಿ ಸದಸ್ಯ ರಮೇಶ್, ಹುಣಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಕುಮಾರಸ್ವಾಮಿ, ಪುರಸಭೆ ಸದಸ್ಯರಾದ ಶಿವರಾಜ್, ಜಾಕಿರ್ ಮತ್ತು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.