ADVERTISEMENT

ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ರದ್ದು

ಮೈಸೂರು ವಿಶ್ವವಿದ್ಯಾನಿಲಯದಿಂದ ಮಹತ್ತರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 30 ಮೇ 2018, 9:41 IST
Last Updated 30 ಮೇ 2018, 9:41 IST
ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ
ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ   

ಮೈಸೂರು: ಮೈಸೂರು ವಿಶ್ವವಿದ್ಯಾ ನಿಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೋಂದಣಿಗಾಗಿ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ ವಿ.ವಿ.ಯು ಮಹತ್ತರ ತೀರ್ಮಾನ ಕೈಗೊಂಡಿದೆ.

ವಿ.ವಿ.ಯಲ್ಲಿ 2017–18ನೇ ಸಾಲಿನಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 765ಕ್ಕೆ ಕುಸಿದಿದೆ. 2008ರಲ್ಲಿ ವಿ.ವಿ.ಗೆ 1400 ವಿದ್ಯಾರ್ಥಿಗಳು ದಾಖಲಾಗಿದ್ದರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲು ಪ್ರವೇಶ ಪರೀಕ್ಷೆಯೇ ಕಾರಣವೆಂದು ವಿ.ವಿ.ಯ ಸಿಂಡಿಕೇಟ್‌ ತೀರ್ಮಾನಿಸಿದ್ದು, ಪರೀಕ್ಷೆಗಳನ್ನು ರದ್ದುಪಡಿಸಿದೆ.

ಪರ್ಯಾಯ ವ್ಯವಸ್ಥೆ: ಪ್ರವೇಶ ಪರೀಕ್ಷೆಗಳ ಬದಲಿಗೆ ವಿ.ವಿ.ಯ ವಿವಿಧ ನಿಕಾಯಗಳಲ್ಲಿ ಪರೀಕ್ಷಾ ಸಮಿತಿಗಳನ್ನು ರಚಿಸಿ ವಿದೇಶಿ ವಿದ್ಯಾರ್ಥಿಗಳನ್ನು ವಿವಿಧ ಕೋರ್ಸ್‌ಗಳಿಗೆ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ನಿಕಾಯಗಳ ಡೀನ್‌ಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದು, ಕುಲಪತಿಯ ಒಪ್ಪಿಗೆಯ ಮೇರೆಗೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳ ವೀಸಾ, ಅಂಕಪಟ್ಟಿ ಸ್ವೀಕರಿಸಿ ಮೇ–ಜೂನ್‌ ತಿಂಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ವಿ.ವಿ.ಯ ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಎಚ್‌.ಆರ್.ಜನಾರ್ದನ ತಿಳಿಸಿದ್ದಾರೆ.

ADVERTISEMENT

ವಿದೇಶಿ ವಿದ್ಯಾರ್ಥಿಗಳು ಬಿ–ಯೋಜನೆಯ ಅಡಿಯಲ್ಲಿ ವಿ.ವಿ.ಗೆ ದಾಖಲಾಗುವ ಕಾರಣ, ವಿ.ವಿ.ಗೆ ಹೆಚ್ಚು ಆದಾಯ ಸಿಗುತ್ತದೆ. ಹಾಗಾಗಿ, ವಿದ್ಯಾರ್ಥಿಗಳನ್ನು ಕಳೆದುಕೊಳ್ಳುವ ಬದಲು, ಅವರಿಗೆ ಅನುಕೂಲಕಾರಿಯಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಸಾಂಸ್ಕೃತಿಕ ಸಂಬಂಧ ಸಮಿತಿಯೊಂದಿಗೆ ವಿ.ವಿ.ಗೆ ಒಪ್ಪಂದವಿದ್ದು, ಸಾರ್ಕ್‌ ರಾಷ್ಟ್ರಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಲು ಸಾಧ್ಯವಾಗುತ್ತಿದೆ. ಅಲ್ಲದೆ, 65ಕ್ಕೂ ಹೆಚ್ಚು ವಿವಿಧ ದೇಶಗಳಿಂದ ವಿದ್ಯಾರ್ಥಿಗಳು ಬರುವ ಅವಕಾಶವಿದ್ದು, 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.