ADVERTISEMENT

ವಿದೇಶಿ ವ್ಯಾಪಾರ ಒಪ್ಪಂದಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:00 IST
Last Updated 11 ಫೆಬ್ರುವರಿ 2012, 10:00 IST

ಮೈಸೂರು: ಯುರೋಪ್ ಒಕ್ಕೂಟದ ಜೊತೆಗೆ ಭಾರತ ಸರ್ಕಾರ ಮುಕ್ತ ವಿದೇಶಿ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವುದನ್ನು ಖಂಡಿಸಿ ಆಶ್ರಯ ಕಾರ್ಯಕರ್ತರು (ಎಚ್‌ಐವಿಯೊಂದಿಗೆ ಬದುಕುತ್ತಿರುವ ಲೈಂಗಿಕ ವೃತ್ತಿ ನಿರತ ಸಮುದಾಯದ ಬೆಂಬಲ ಗುಂಪು) ಶುಕ್ರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೌನ ಮೆರವಣಿಗೆ ನಡೆಸಿದರು.

ವಿದೇಶಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ಸಾಮಾನ್ಯ ಔಷಧಿಗಳ ಬೆಲೆ ಹೆಚ್ಚಳವಾಗಲಿದೆ. ಅದರಲ್ಲೂ ಮುಖ್ಯವಾಗಿ ಎಚ್‌ಐವಿ ಸೋಂಕು ತಗಲಿರುವ ವ್ಯಕ್ತಿಗಳು ಬಳಸುವ ಎಆರ್‌ಟಿ ಮಾತ್ರೆಯ ದರ ಹೆಚ್ಚಾಗುತ್ತದೆ.

ಸದ್ಯ 2500 ರೂಪಾಯಿಗೆ ಎಆರ್‌ಟಿ ಮಾತ್ರೆಗಳು ದೊರಕುತ್ತಿದ್ದು, ಸರ್ಕಾರ ಒಪ್ಪಂದ ಮಾಡಿಕೊಂಡರೆ ಮಾತ್ರೆಯ ಬೆಲೆ 10 ರಿಂದ 15 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ನವದೆಹಲಿಯಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಎಚ್‌ಐವಿ ಹೊಂದಿರುವವರು ಎಆರ್‌ಟಿ ಮಾತ್ರೆಗಳ ಮೇಲೆ ಭರವಸೆ ಇಟ್ಟಿದ್ದಾರೆ. ಕಡಿಮೆ ಬೆಲೆಯಲ್ಲಿ ಮಾತ್ರೆಗಳು ಸಿಗುವುದರಿಂದ ಸರ್ಕಾರ ಉಚಿತವಾಗಿ ನೀಡುತ್ತಿದೆ. ಆದರೆ, ಮುಕ್ತ ವಿದೇಶಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರಿಂದ ತೊಂದರೆ ಯಾಗಲಿದೆ ಎಂದು ದೂರಿದರು.

ಕೆ.ಆರ್.ಮೊಹಲ್ಲಾದ ಆಶ್ರಯ ಕಚೇರಿಯಿಂದ ಜಾಥಾ ಹೊರಟು ಮರಿಯಮ್ಮ ದೇವಸ್ಥಾನ ಮಾರ್ಗವಾಗಿ ಅರಮನೆ ಉತ್ತರ ಗೇಟ್ ತಲುಪಿದರು. `ಸಮಾಜದಲ್ಲಿ ನಮಗೂ ಬದುಕುವ ಹಕ್ಕಿದೆ~, `ನಮ್ಮನ್ನು ದೂರವಿರಬೇಡಿ~ ಎಂಬ ಫಲಕಗಳೊಂದಿಗೆ ಗಮನ ಸೆಳೆದರು.

ಸಂಸ್ಥೆಯ ಅಧ್ಯಕ್ಷೆ ಪಲ್ಲವಿ, ಫಾತಿಮಾ, ಮೇರಿ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.