ADVERTISEMENT

ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಜ್ಞೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 6:20 IST
Last Updated 1 ಮಾರ್ಚ್ 2012, 6:20 IST

ಸಾಲಿಗ್ರಾಮ: ಕಾವ್ಯ ಕವಿಯ ಭಾವನೆಯಿಂದ ಬರುವ ವಿಷಯವಲ್ಲ, ಅದು ಕವಿಯ ಹಿಂದಿರುವ ಸಾಮಾಜಿಕ ಅಂಶಗಳನ್ನು ಒಳ ಗೊಂಡಿರುತ್ತದೆ ಎಂದು ಮೈಸೂರಿನ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ವರದರಾಜು ಬುಧವಾರ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಶ್ರೀ ವಿಜಯ ಕನ್ನಡ ಸಂಘವು ಆಯಾೀಜಿಸಿದ್ದ ರಾಷ್ಟ್ರಕವಿ ಕುವೆಂಪು ಮತ್ತು ವರಕವಿ ದ.ರಾ.ಬೇಂದ್ರೆ ಸಾಹಿತ್ಯ ಚಿಂತನೆ ಕುರಿತಾದ ಕಾಲೇಜು ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು  ಕುವೆಂಪು ಮತ್ತು ದ.ರಾ.ಬೇಂದ್ರೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಿಕ್ಕಿದ್ದು ಪುಣ್ಯ.
 
ಇಂತಹ ಮಹನೀಯರ ಪರಿಶ್ರಮದಿಂದ ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಂಡಿದೆ ಎಂದು ತಿಳಿಸಿದರು.
ಕವಿ ಕಾವ್ಯವನ್ನು ರಚಿಸುವಾಗ ತನ್ನ ಮನದಲ್ಲಿ ಇರುವ ಭಾವನೆಯನ್ನು ಹೊರ ಹಾಕುವುದಿಲ್ಲ. ಬದಲಿಗೆ ತನ್ನ ಸುತ್ತಮುತ್ತಲ ಸಾಮಾಜಿಕ ಪರಿಸರವನ್ನು ಗಮನಿಸಿ ಅದಕ್ಕೆ ಜೀವ ತುಂಬುವ ಕೆಲಸ ಮಾಡುತ್ತಾನೆ. ಇದು ಜನಮಾನಸದಲ್ಲಿ ಉಳಿಯುತ್ತದೆ. ಇದರಿಂದ ಜನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.

ವಿಚಾರ ಸಂಕಿರಣದಲ್ಲಿ ಕೆ.ಆರ್. ನಗರ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಚ್. ಎನ್.ಮಂಜುರಾಜ್, ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಲತಾ, ಮಂಡ್ಯ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮದನ್‌ಕುಮಾರ್ ಉಪನ್ಯಾಸ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಜಿ. ಪ್ರಕಾಶ್, ಕನ್ನಡ ವಿಭಾಗದ ಮುಖ್ಯಸ್ಥ ಬಸವಂತಪ್ಪ ಗುದಗತ್ತಿ, ಪ್ರಾಧ್ಯಾಪಕಿ ದೇವಮ್ಮಣ್ಣಿ, ವಿದ್ಯಾರ್ಥಿನಿ ವಿದ್ಯಾಶ್ರೀ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.