ADVERTISEMENT

ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಜಾಗದ್ದೇ ಸಮಸ್ಯೆ!

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 5:45 IST
Last Updated 9 ನವೆಂಬರ್ 2012, 5:45 IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿರುವ ಜಾಗದಲ್ಲಿ (ಕುಕ್ಕರಹಳ್ಳಿ ಕೆರೆ ರಸ್ತೆ) ನಿರ್ಮಿಸಲಾಗುತ್ತಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಕಾಮಗಾರಿಗೆ ಮಹಾನಗರ ಪಾಲಿಕೆ ತಡೆಯಾಜ್ಞೆ ನೀಡಿರುವುದಕ್ಕೆ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, `ಶಾಸಕರು, ಸಂಸದರು ನಾವಿನ್ನೂ ಬದುಕಿದ್ದೇವೆ, ಸತ್ತಿಲ್ಲ. ಕಾಮಗಾರಿಗೆ ತಡೆಯಾಜ್ಞೆ ನೀಡಿರುವ ಬಗ್ಗೆ ಯಾರೊಬ್ಬರೂ ನಮ್ಮ ಗಮನಕ್ಕೆ ತಂದಿಲ್ಲ. ಇದರರ್ಥ ಯಾರಿಗೂ ಇಚ್ಛಾಶಕ್ತಿ ಇದ್ದಂತಿಲ್ಲ.

ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ, ಅವರನ್ನು ಭವಿಷ್ಯದ ಸತ್ಪ್ರಜೆಗಳನ್ನಾಗಿ ರೂಪಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ನೀವುಗಳು ವಿದ್ಯಾರ್ಥಿ ನಿಲಯದ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಎಂ.ಆರ್.ರವಿ, `ಆ ಜಾಗ ಮೈಸೂರು ವಿವಿಗೆ ಸೇರಿದ್ದು, ಉದ್ಯಾನಕ್ಕೆ ಮೀಸಲಾಗಿ ಇಡಲಾಗಿದೆ. ಹೀಗಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತಡೆಯಾಜ್ಞೆ ನೀಡಲಾಗಿದೆ~ ಎಂದು ವಿವರಿಸಿದರು. ಆದರೆ, ಆಯುಕ್ತರ ಉತ್ತರಕ್ಕೆ ತೃಪ್ತರಾಗದ ತನ್ವೀರ್, `ಏನೇ ಇರಲಿ, ಈ ಬಗ್ಗೆ ನಮ್ಮ ಗಮನಕ್ಕೆ ಏಕೆ ತಂದಿಲ್ಲ?~ ಎಂದು ಪ್ರಶ್ನಿಸಿದರು.

ಬಳಿಕ ಮಧ್ಯ ಪ್ರವೇಶಿಸಿದ ಸಂಸದ ಎಚ್.ವಿಶ್ವನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್ ಅವರು, `ಆದದ್ದು ಆಗಿದೆ. ಅಡೆತಡೆಗಳನ್ನು ನಿವಾರಿಸಿ, ಕೂಡಲೇ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡಿಬೇಕು~ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, `ಮೈಸೂರು ಜಿಲ್ಲೆಯಲ್ಲಿ ಒಟ್ಟು 78 ವಿದ್ಯಾರ್ಥಿ ನಿಲಯಗಳು, ಆಶ್ರಮ ಶಾಲೆಗಳು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, 59 ಸ್ವಂತ ಕಟ್ಟಡ ಹೊಂದಿವೆ.

19 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 7 ನಿವೇಶನಗಳು ಲಭ್ಯವಿದ್ದು, 12 ನಿವೇಶನಗಳನ್ನು ಖರೀದಿಸಬೇಕಾಗಿದೆ~ ಎಂದು ಮಾಹಿತಿ ನೀಡಿದರು. ಸಂಸದ ಎಚ್.ವಿಶ್ವನಾಥ್, ಶಾಸಕರಾದ ಚಿಕ್ಕಣ್ಣ, ಎಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.