ADVERTISEMENT

ವೈಭವದ ಮಲೆಮಹದೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2011, 8:35 IST
Last Updated 31 ಅಕ್ಟೋಬರ್ 2011, 8:35 IST
ವೈಭವದ ಮಲೆಮಹದೇಶ್ವರ ರಥೋತ್ಸವ
ವೈಭವದ ಮಲೆಮಹದೇಶ್ವರ ರಥೋತ್ಸವ   

ಬನ್ನೂರು: ಪಟ್ಟಣಕ್ಕೆ ಸಮೀಪದ ಅರವಟ್ಟಿಗೆ ಕೊಪ್ಪಲು ಗ್ರಾಮದಲ್ಲಿನ ಮಲೆಮಹದೇಶ್ವರ ಸ್ವಾಮಿ ದೇವಾಲಯದ ರಥೋತ್ಸವವು  ವಾದ್ಯ ಮೇಳದ ನಿನಾದ ಹಾಗೂ ಜಾನಪದ ಕಂಸಾಳೆಯೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆಯಿಂದಲೇ ಯಜ್ಞ ಯಾಗಾದಿ ಗಳೊಂದಿಗೆ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಿಲ್ವಾರ್ಚನೆ, ಅಭಿಷೇಕ ಮಾಡಿ ತುಳಸಿ ಹಾರ ಸೇರಿದಂತೆ ವಿವಿಧ ಬಗೆಯ ಪುಷ್ಪಾಹಾರಗಳಿಂದ ದೇವರನ್ನು ಹಾಗೂ ದೇವಾಲಯವನ್ನು ಸಿಂಗರಿಸಲಾಗಿತ್ತು. ಹರಕೆ ಹೊತ್ತ ಭಕ್ತರಿಂದ ಪಂಜಿನ ಸೇವೆ ಹಾಗೂ ಹುಲಿವಾಹನದ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಭಾನುವಾರ ಮುಂಜಾನೆಯಿಂದಲೇ ಸುತ್ತ ಮುತ್ತಲಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಪೂಜಾ ಸಾಮಗ್ರಿಯೊಂದಿಗೆ ದೇವಾಲಯಕ್ಕೆ ಆಗಮಿಸುತ್ತಿದ್ದರು. ದೇವರ ಮಂತ್ರಘೋಷಗಳು ಆರಂಭವಾದ ನಂತರ ರಥ ಸಾಗುವ ರಾಜಬೀದಿಯಲ್ಲಿ ತೀರ್ಥವನ್ನು ಹಾಕುವ ಮೂಲಕ ರಸ್ತೆಯನ್ನು ಪರಿಶುದ್ಧ ಗೊಳಿಸಲಾಯಿತು.

ನಂತರ ಬಣ್ಣದಬಣ್ಣದ ಪತಾಕೆಗಳಿಂದ ಸಿಂಗರಿಸಲಾಗಿದ್ದ ರಥಕ್ಕೆ ಕಳಸವನ್ನು ಪ್ರತಿಷ್ಠಾಪಿಸಲಾಯಿತು. ಹೂವಿನಿಂದ ಅಲಂಕಾರಗೊಂಡ ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಮಾಡಿ ಪ್ರತಿಷ್ಠಾಪಿಸಲಾಯಿತು. ಮುಗಿಲು ಮುಟ್ಟಿದ ಘೋಷಣೆಯೊಂದಿಗೆ ಸಂಜೆ 4.30ರ ವೇಳೆಗೆ ರಥೋತ್ಸವಕ್ಕೆ ಭವ್ಯ ಚಾಲನೆ ನೀಡಲಾಯಿತು.

ಒಂದೆಡೆ ರಥ ಸಾಗುವ ಮಾರ್ಗದ ಮುಂಭಾಗ ಮೆರವಣಿಗೆಯೊಂದಿಗೆ ಯುವಕರ ಕೋಲಾಟ, ಜನಪದಗೀತೆಯ ಕಲರವ, ಕಂಸಾಳೆಯ ನಾದದೊಂದಿಗೆ ಯುವಕರು ಹೆಜ್ಜೆಯನ್ನು ಹಾಕುತ್ತಿದ್ದರೆ, ಮತ್ತೊಂದೆಡೆ ಮಂಗಳವಾದ್ಯ ರಥೋತ್ಸವಕ್ಕೆ ಮೆರುಗು ನೀಡಿತು.

ಹರಕೆಯನ್ನು ಹೊತ್ತ ಸಾವಿರಾರು ಭಕ್ತರು ಹಣ್ಣು, ಜವನಗಳನ್ನು ರಥದ ಕಡೆ ಎಸೆಯುವ ಮೂಲಕ ತಮ್ಮ ಹರಕೆ ಪೂರೈಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಬನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿಯು ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.