ADVERTISEMENT

ಶಾಲಾ ವಾಹನ ಪಲ್ಟಿ: 20 ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 6:10 IST
Last Updated 10 ಆಗಸ್ಟ್ 2012, 6:10 IST

ಸಾಲಿಗ್ರಾಮ: ಶಾಲಾ ವಾಹನ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಮಾಳನಾಯಕನಹಳ್ಳಿ-ರೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.   

ಚುಂಚನಕಟ್ಟೆಯ ಆದಿಚುಂಚನಗಿರಿ ಬಾಲಜಗತ್ ಶಿಕ್ಷಣ ಸಂಸ್ಥೆಯ ಶಾಲಾ ವಾಹನ ಮಿರ್ಲೆಯಿಂದ ಮಾಳನಾಯಕನಹಳ್ಳಿ-ರೊಪ್ಪ ಮಾರ್ಗವಾಗಿ ಶಾಲೆಗೆ ಹೋಗುವಾಗ ಚಾಲಕನ ಅಜಾಗರೂಕತೆ ಹಾಗೂ ವಾಹನ ಕೆಟ್ಟ ಪರಿಣಾಮ ಪಲ್ಟಿ ಹೊಡೆಯಿತು.

ಪಲ್ಟಿ ಹೊಡೆದ ರಭಸಕ್ಕೆ ವಾಹನದ ಒಳಗಿದ್ದ ಮಕ್ಕಳ ತಲೆ,  ಕೈ-ಕಾಲುಗಳಿಗೆ ತೀವ್ರವಾಗಿ ಪೆಟ್ಟುಬಿತ್ತು. ಮಕ್ಕಳ ಚಿರಾಟ ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡ ಮಕ್ಕಳನ್ನು ಸ್ಕೂಟರ್, ವಾಹನ ಹಾಗೂ ಆ್ಯಂಬುಲೆನ್ಸ್‌ನಲ್ಲಿ ಸಾಲಿಗ್ರಾಮ ಹಾಗೂ ಕೆ.ಆರ್.ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ನೆರವಾದರು.

ಶಾಲಾ ಮುಖ್ಯ ಶಿಕ್ಷಕಿ ಉಮಾ ಹಾಗೂ ಚಾಲಕ ಮುರಳಿ ಗಾಯಗೊಂಡ ಮಕ್ಕಳನ್ನು ವಾಹನದಿಂದ ಕೆಳಗೆ ಎಳೆಯುತ್ತಿದ್ದರು. ಇದರಿಂದ ಆಕ್ರೋಶಗೊಂಡ ಕೆಲವರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರಿಂದ ಆತ ಪರಾರಿಯಾಗಿದ್ದಾನೆ.

ಘಟನೆ ವಿವರ
ಚುಂಚನಕಟ್ಟೆಯ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಶಾಲಾ ವಾಹನ ಎಂದಿನಂತೆ ಗುರುವಾರ ಬೆಳಿಗ್ಗೆ ಅಂಕನಹಳ್ಳಿ, ನಾಟನಹಳ್ಳಿ, ಮಿರ್ಲೆ, ನರಚನಹಳ್ಳಿ, ಮಾಳನಾಯಕನಹಳ್ಳಿ, ರೊಪ್ಪ ಹಾಗೂ ಸುತ್ತಲಿನ ಗ್ರಾಮಗಳಿಂದ ಎಲ್‌ಕೆಜಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿತ್ತು. ವಾಹನದ ಬ್ಲೇಡ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಇದರಿಂದಾಗಿ ಗಾಯಗೊಂಡ ವಿದ್ಯಾರ್ಥಿಗಳಾದ ಹಂಸರಾಜ್, ಸುಶ್ಮೀತ, ಮಧುಮಿತ, ಸಂಸ್ಕೃತಿ, ಕಾಂಚನ ಸೇರಿದಂತೆ 10ಕ್ಕೂ ಹೆಚ್ಚು ಮಕ್ಕಳಿಗೆ ಸಾಲಿಗ್ರಾಮ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದರ್ಶನ್ ಪ್ರಥಮ ಚಿಕಿತ್ಸೆ ನೀಡಿದರು. ತೀವ್ರವಾಗಿ ಗಾಯಗೊಂಡ ಮಕ್ಕಳು  ಕೆ.ಆರ್.ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೋಷಕರ ಆಕ್ರೋಶ
ವಿಷಯ ತಿಳಿದ ಪೋಷಕರು ಸಾಲಿಗ್ರಾಮ ಸಮುದಾಯ ಆಸ್ಪತ್ರೆಯಲ್ಲಿ ಜಮಾಯಿಸಿ ಅಪಘಾತ ನಡೆದ ವಿಷಯ ತಿಳಿದಿದ್ದರೂ ಸ್ಥಳಕ್ಕೆ ಆಗಮಿಸದ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸ್ವಾಮೀಜಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಮಕ್ಕಳನ್ನು ಕರೆದೊಯ್ಯುವ ವಾಹನಗಳು ಹಾಳಾಗಿದ್ದು ಎರಡನೇ ಬಾರಿ ಅಪಘಾತ ಸಂಭವಿಸಿದೆ.

ಈ ಹಿಂದೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಆದರೂ ಸ್ವಾಮೀಜಿ ಎಚ್ಚರ ವಹಿಸುತ್ತಿಲ್ಲ  ಎಂದು ಆರೋಪಿಸಿದರು. ಕಳೆದ ಬಾರಿ ನಡೆದ ಘಟನೆ ಸ್ಥಳಕ್ಕೆ ಆಗಮಿಸದೇ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕಲಾಗಿತ್ತು. ಈಗಲೂ ಸ್ವಾಮೀಜಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.  

ಸಾಲಿಗ್ರಾಮ ಪೊಲೀಸ್ ಠಾಣೆಯ ಹೆಚ್ಚುವರಿ ಪಿಎಸ್‌ಐ ವನರಾಜ್ ಹಾಗೂ ಸುರೇಂದ್ರ ವಾಹನ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.