ADVERTISEMENT

ಶಿವಪುರದ ಸುತ್ತ ಸಮಸ್ಯೆಗಳ ಪೊದೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 8:45 IST
Last Updated 12 ಏಪ್ರಿಲ್ 2012, 8:45 IST

ಸರಗೂರು: ತಾಲ್ಲೂಕಿನ ಮುತ್ತಿಗೆಚಿಕ್ಕತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಿವಪುರ ಗ್ರಾಮ ಸಮಸ್ಯೆಗಳ `ಪೊದೆ~ಯಲ್ಲಿ ಸಿಕ್ಕು ನಲುಗುತ್ತಿದೆ.

ತಾಲ್ಲೂಕಿನ ಗಡಿ ಪ್ರದೇಶದ ಈ ಗ್ರಾಮದ 780 ಜನ ನಾಗರಿಕ ಸೌಲಭ್ಯವಿಲ್ಲದೇ ಪರಿತಪಿಸುವಂತಾಗಿದೆ. ಗ್ರಾಮದಲ್ಲಿ ಕುಡಿಯುವ ನೀರು ಯೋಗ್ಯವಾಗಿಲ್ಲ. ನಲ್ಲಿಯಲ್ಲಿ ಬರುವ ನೀರಿನಲ್ಲಿ ಕಸ ಕಡ್ಡಿ ತುಂಬಿಕೊಂಡಿದೆ.

ಆದರೂ ಈ ಸಮಸ್ಯೆ ನೀಗಿಸಲು ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಸ್ಕರ್ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಪ್ರಕಾಶ್.

ಈ ಹಿಂದೆ ಪಂಚಾಯಿತಿಯಿಂದ ಟ್ಯಾಂಕ್ ಸ್ವಚ್ಛಗೊಳಿಸಿದರೂ ನೀರು ಅದೇ ರೀತಿ ಬರುತ್ತಿದೆ. ಈ ನೀರು ಕುಡಿದು ಗ್ರಾಮದಲ್ಲಿನ ಜನರಿಗೆ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆಯುವಂತಾಗಿದೆ. ಈ ಬಗ್ಗೆ ದೂರು ನೀಡಿದರೂ ಹಿರಿಯ ಅಧಿಕಾರಿಗಳು ಗಮನ ಕೊಡುತ್ತಿಲ್ಲ. ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ. ಇದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಗಮನ ನೀಡುತ್ತಿಲ್ಲ. ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲ, ಬೀದಿ ದೀಪವಿಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಗ್ರಾಮದ ಜನ ಕಗ್ಗಾಡಿನಲ್ಲಿ ಬದುಕುವ ಅನುಭವವಾಗುತ್ತಿದೆ ಎಂಬುದು ಗ್ರಾಮಸ್ಥರ ಅಳಲು.

ಬೀದಿ ದೀಪ ಕೆಟ್ಟು ತಿಂಗಳಾದರೂ ದುರಸ್ತಿ ಮಾಡಿಸಿಲ್ಲ. ರಾತ್ರಿ ಸಮಯದಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ತಿರುಗಾಡಲು ತೊಂದರೆ ಆಗುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ತ್ಯಾಜ್ಯ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಗ್ರಾಮದ ಸುತ್ತಮುತ್ತ ಹಾಗೂ ನಡುವೆ ಗಿಡಗಂಟಿ ಬೆಳೆದಿವೆ. ಅವುಗಳನ್ನು ಕಟಾವು ಮಾಡಿ ಶುಚಿತ್ವ ಕಾಪಾಡುವ ಕನಿಷ್ಠ ಕಾಳಜಿಯನ್ನೂ ಗ್ರಾಮ ಪಂಚಾಯಿತಿ ಸದಸ್ಯರು ಈವರೆಗೂ ತೋರಿಲ್ಲ.
 
ಮೂರೂ ಗ್ರಾಮದಲ್ಲಿ ಕೇವಲ 250 ಪಡಿತರ ಚೀಟಿದಾರರು ಇದ್ದಾರೆ. ಆದರೂ ಪಡಿತರ ವ್ಯವಸ್ಥೆ ಮಾಡುತ್ತಿಲ್ಲ. ಶಿವಪುರ ಗ್ರಾಮದಲ್ಲಿ ಪಡಿತರ ವ್ಯವಸ್ಥೆಯನ್ನು ಸರಿಪಡಿಸುವಂತೆ ಜನ ಸ್ಪಂದನ ಸಭೆಯಲ್ಲಿ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.